ಬೆಂಗಳೂರು:ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕ ಮತ್ತು ನಟ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನ ಹಿನ್ನೆಲೆ ದೊಡ್ಡಬಳ್ಳಾಪುರ, ಚಾಮರಾಜನಗರ, ಗಂಗಾವತಿ, ವಿಜಯಪರ ಹಾಗೂ ದಾವಣಗೆರೆಯಲ್ಲಿ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಸ್ಪಿಬಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಕುಮಾರ್, 16 ಭಾಷೆಗಳಲ್ಲಿ 40ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಏಕೈಕ ಗಾಯಕ ಎಸ್‌ಪಿಬಿ. ಜಾನಪದ, ಭಕ್ತಿಗೀತೆ, ಚಲನಚಿತ್ರ ಗೀತೆ ಮತ್ತು ಭಾವಗೀತೆ ಸೇರಿ ಎಲ್ಲಾ ರೀತಿಯ ಗೀತೆಗಳನ್ನು ಹಾಡಿರುವ ಅಮೂಲ್ಯ ರತ್ನವಾಗಿದ್ದರು. ಅವರನ್ನು ಕಳೆದುಕೊಂಡ ಭಾರತದ ಸಾಂಸ್ಕೃತಿಕ ಲೋಕ ತಬ್ಬಲಿಯಾಗಿದೆ ಎಂದರು.