ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರ ರಾಜೀನಾಮೆಯಿಂದ ರಾಜ್ಯಕ್ಕೆ ಉಪಕಾರ: ಎಸ್​ ಎಂ ಕೃಷ್ಣ - ಉಪ ಚುನಾವಣೆ ಸುದ್ದಿ

ರಾಜ್ಯದಲ್ಲಿ ಮಹತ್ವದ ಉಪ ಚುನಾವಣೆ ನಡೆಯುತ್ತಿದೆ. ಯಾರ ರಾಜೀನಾಮೆ ಕಾರಣದಿಂದ ಬಿಜೆಪಿ ಅಧಿಕಾರದಲ್ಲಿದೆಯೋ ಆ ಮಹನೀಯರು ನಮ್ಮ ರಾಜ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ತಿಳಿಸಿದರು.

S M Krishna
ಎಸ್​ ಎಂ ಕೃಷ್ಣ ಸುದ್ದಿಗೋಷ್ಟಿ

By

Published : Dec 3, 2019, 12:51 PM IST

ಬೆಂಗಳೂರು:ಮತ್ತೊಬ್ಬರ ಹಂಗಿನಲ್ಲಿ ರಾಜ್ಯಭಾರ ಮಾಡುವ ಪರಿಸ್ಥಿತಿಗೆ ಇತಿಶ್ರೀ ಹಾಡಬೇಕು. ಇದೆಲ್ಲದಕ್ಕೂ ಫಲಿತಾಂಶದ ದಿನ ತೆರೆ ಬೀಳಲಿದೆ. ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್​ ಎಂ ಕೃಷ್ಣ ಸುದ್ದಿಗೋಷ್ಟಿ

ಮಲ್ಲೇಶ್ವರಂ ನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಹತ್ವದ ಉಪ ಚುನಾವಣೆ ನಡೆಯುತ್ತಿದೆ. ಯಾರ ರಾಜೀನಾಮೆ ಕಾರಣದಿಂದ ಬಿಜೆಪಿ ಅಧಿಕಾರದಲ್ಲಿದೆಯೋ ಆ ಮಹನೀಯರು ನಮ್ಮ ರಾಜ್ಯಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ಅವರು ಇಂತಹ ಪರಿಸ್ಥಿತಿ ನಿರ್ಮಾಣ ಮಾಡದೇ ಇದ್ದರೆ 14 ತಿಂಗಳ ಗೊತ್ತುಗುರಿ ಇಲ್ಲದ ಸರ್ಕಾರ ನಮ್ಮ ರಾಜ್ಯದಲ್ಲಿ ನಡೆಯುತ್ತಿತ್ತೋ ಅದನ್ನೇ ಇನ್ನೂ ನೋಡಬೇಕಾದ ದುರ್ಬಲ ಪರಿಸ್ಥಿತಿ ಉಂಟಾಗುತ್ತಿತ್ತು ಎಂದು ಅನರ್ಹ ಶಾಸಕರ ನಿರ್ಧಾರ ಮತ್ತು ಉಪ ಚುನಾವಣೆ ಸನ್ನಿವೇಶವನ್ನು ಸಮರ್ಥಿಸಿಕೊಂಡರು.

ರಾಜ್ಯದ ಜನ ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ ನಾವು 113ರ ಗಡಿ ತಲುಪಲಿಲ್ಲ. 14 ತಿಂಗಳ ಆಡಳಿತದ ಕಾರ್ಯ ವೈಖರಿ ನೋಡಿ 17 ಶಾಸಕ ಮಿತ್ರರು ರಾಜೀನಾಮೆ ಕೊಡಲು ಮುಂದೆ ಬಂದರು. ಅದರ ಪರಿಣಾಮ ಈಗ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಸದೃಢವಾದ ಹೆಜ್ಜೆಯಿಡಲು ಮತದಾರರು ಅನುವು ಮಾಡಿಕೊಡಬೇಕು ಎಂದು ಎಸ್​ಎಂಕೆ ಮನವಿ ಮಾಡಿದ್ರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಸಂಚಲನ ಆರಂಭವಾಗಿದ್ದು, ದೊಡ್ಡಮಟ್ಟದ ಬದಲಾವಣೆಯನ್ನು ಜನ ನಿರೀಕ್ಷೆ ಮಾಡುತ್ತಿದ್ದಾರೆ. ಅದಕ್ಕೆ ಆಡಳಿತ ಪಕ್ಷದ ಎಲ್ಲ ಅಭ್ಯರ್ಥಿಗಳು 15 ಕ್ಷೇತ್ರದಲ್ಲಿ ಗೆದ್ದಾಗ ಸ್ಪಷ್ಟ ಬಹುಮತ ಬರಲಿದೆ. ಸರ್ಕಾರವೂ ಸದೃಢಗೊಳ್ಳಲಿದೆ, ಒಬ್ಬರು ಮಧ್ಯಂತರ ಚುನಾವಣೆ ನಿರೀಕ್ಷೆಯಲ್ಲಿದ್ದರೆ, ಮತ್ತೊಬ್ಬರು ಸರ್ಕಾರ ಬೀಳಿಸಲ್ಲ ಎನ್ನುತ್ತಾರೆ. ಆದ್ರೆ ಸರ್ಕಾರ ಬೀಳಿಸುವ ತಾಕತ್ತು ಅವರಿಗೆ ಬೇಕಲ್ಲ. ನಾವು ಅದನ್ನೆಲ್ಲಾ ನೋಡದೇ ಚುನಾವಣಾ ಗೆಲುವಿನತ್ತ ಗಮನಹರಿಸುತ್ತಿದ್ದೇವೆ ಎಂದರು.

ಬಿಜೆಪಿ ಸರ್ಕಾರ ಬೀಳಿಸಲ್ಲ ಎನ್ನುವ ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಆದ್ರೆ ಅವರ ಪುತ್ರ, ಮಾಜಿ ಸಿಎಂ ಕುಮಾರಸ್ವಾಮಿ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ ನಲ್ಲಿ ಇದ್ದವನಲ್ಲ, ಜೆಡಿಎಸ್ ನವನೂ ಅಲ್ಲ. ಹಾಗಾಗಿ ಅವರ ಸ್ಟ್ಯಾಂಡ್ ಬಗ್ಗೆ ಗೊತ್ತಿಲ್ಲ. ಆದ್ರೆ ಮಾಜಿ ಪ್ರಧಾನಿ ಹೇಳಿಕೆಗೆ ಕಿಮ್ಮತ್ತು ಇರಲಿದೆ ಎಂದು ಎಸ್​ ಎಂ ಕೃಷ್ಣ ಹೇಳಿದ್ರು.

ಅನರ್ಹ ಶಾಸಕರು ಬಿಜೆಪಿಗೆ ಬಂದಿದ್ದು, ಭವಿಷ್ಯದಲ್ಲಿ ಅವರು ಈ ಪಕ್ಷಕ್ಕೆ ಹೊಂದಿಕೊಳ್ಳಲಿದ್ದಾರೆ. ನಾನು ಕೂಡ ಬೇರೆ ರಾಜಕೀಯ ಸಂಸ್ಕೃತಿಯಿಂದ‌ ಬೆಳೆದು ಬಂದವನು. ನಾನು ಅವರೊಂದಿಗೆ‌ ಒಡನಾಟ ಇಟ್ಟಕೊಂಡಿಲ್ಲವಾ? ಅದೇ ರೀತಿ ಅನರ್ಹ ಶಾಸಕರೂ ಹೊಂದಿಕೊಳ್ಳಲಿದ್ದಾರೆ ಎಂದು ಮಾಜಿ ಸಿಎಂ ಅಭಿಪ್ರಾಯಪಟ್ಟರು.

ಮೈತ್ರಿ ಸರ್ಕಾರ ಪತನಕ್ಕೆ ನಾನೂ ಕಾರಣ:
ಹಳೆಯ ಅಭಿಮಾನಿಗಳು ಬಹಳ ಜನ ಇದ್ದಾರೆ. ನನ್ನ ಯೋಗಕ್ಷೇಮ ವಿಚಾರಿಸಲು ಬಹಳ ಜನ ಬರುತ್ತಿದ್ದರು. ಆಗ ರಾಜ್ಯದ ಯೋಗಕ್ಷೇಮ ಕುರಿತು ಮಾತನಾಡುತ್ತಿದ್ದೆ, ಎಲ್ಲವನ್ನೂ ಹೇಳಿ ಕಳಿಸುತ್ತಿದ್ದೆ. ಹಾಗಾಗಿ ಮೈತ್ರಿ‌ ಸರ್ಕಾರ ಬೀಳಲು ನಾನೂ ಕೂಡ‌ ಒಬ್ಬ ಕಾರಣ. ಆ ಹೇಳಿಕೆಗೆ ಈಗಲೂ ಬದ್ಧವೆಂದು ಎಸ್.ಎಂ. ಕೃಷ್ಣ ಸ್ಪಷ್ಟಪಡಿಸಿದರು.

ABOUT THE AUTHOR

...view details