ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸಕ್ಕೆ ಇಂದು ಕೇಂದ್ರದ ಮಾಜಿ ಸಚಿವ ಎಸ್ ಎಂ ಕೃಷ್ಣ ಕುಟುಂಬಸ್ಥರು ಭೇಟಿ ನೀಡಲಿದ್ದು, ಹುಡುಗಿ ನೋಡುವ ಶಾಸ್ತ್ರ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆ ಈಗಾಗಲೇ ಸದಾಶಿವನಗರದ ಡಿಕೆಶಿ ನಿವಾಸದ ಬಳಿ ಸಿಂಗಾರ ಮಾಡಲಾಗಿದ್ದು, ರಂಗೋಲಿ, ಡೆಕೋರೇಶನ್ ಮಾಡುವ ಕಾರ್ಯದಲ್ಲಿ ಮಹಿಳೆಯರು ನಿರತರಾಗಿದ್ದಾರೆ. ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಎಸ್ಎಂ ಕೃಷ್ಣ ಮೊಮ್ಮಗ ಅಮರ್ತ್ಯ ಹೆಗ್ಡೆ ವಿವಾಹಕ್ಕೆ ಸಂಬಂಧಿಸಿದಂತೆ ಇಂದು ಮಾತುಕತೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
ಸಂಕಷ್ಟಗಳ ನಂತರ ಡಿಕೆಶಿ ನಿವಾಸದಲ್ಲಿ ಸರಣಿ ಸಂಭ್ರಮ: ಐಟಿ, ಇಡಿ ಬಳಿಕ ಎಐಸಿಸಿಯಿಂದ ಅಧ್ಯಕ್ಷ ಸ್ಥಾನದ ಗಿಫ್ಟ್ ಪಡೆದಿದ್ದ ಡಿಕೆಶಿ ಇದೀಗ ಪುತ್ರಿಯ ವಿವಾಹ ಸಂಭ್ರಮದಲ್ಲಿದ್ದಾರೆ. ಈ ಸಂಬಂಧ ಕಳೆದ ಕೆಲ ದಿನಗಳಿಂದ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದ್ದು, ಅಂತಿಮ ಹಂತದ ಮಾತುಕತೆ ನಡೆಯುವ ನಿರೀಕ್ಷೆ ಇದೆ.
ನಿನ್ನೆಯಷ್ಟೇ ಹುಡುಗನನ್ನು ನೋಡುವ ಶಾಸ್ತ್ರವನ್ನು ಡಿ ಕೆ ಶಿವಕುಮಾರ್ ಕುಟುಂಬ ಮಾಡಿತ್ತು. ಸದಾಶಿವ ನಗರದಲ್ಲಿ ಇರುವ ಎಸ್ಎಂ ಕೃಷ್ಣ ನಿವಾಸಕ್ಕೆ ತೆರಳಿದ್ದ ಡಿಕೆಶಿ ಕುಟುಂಬ ಅಮಾರ್ತ್ಯ ಹೆಗ್ಡೆ ಹಾಗೂ ಉಳಿದ ಸದಸ್ಯರೊಂದಿಗೆ ಮಾತನಾಡಿ ಹಿಂತಿರುಗಿತ್ತು. ಇಂದು ಹುಡುಗನ ಕಡೆಯವರು ಔಪಚಾರಿಕ ಭೇಟಿ ನೀಡಲಿದ್ದಾರೆ.
ಮಾತುಕತೆ ನಡೆಸಿದ ಬಳಿಕ ಸಂಜೆ ಎಸ್ ಎಂ ಕೆ ಸಹೋದರಿ ನಿವಾಸಕ್ಕೆ ಹಿರಿಯರು ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಸಹೋದರಿ ನಿವಾಸದಲ್ಲಿ ಔತಣಕೂಟ ಕೂಡ ಏರ್ಪಡಿಸಲಾಗಿದೆ. ಅಲ್ಲಿಯೇ ನಿಶ್ಚಿತಾರ್ಥದ ದಿನಾಂಕ ಕೂಡ ನಿಗದಿಪಡಿಸಲಿದ್ದಾರೆ.