ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿಗೆ ಸದಸ್ಯರ ನೇಮಕ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ 2.5 ಕೋಟಿ ರೂ. ಲಂಚ ಸ್ವೀಕರಿಸಲಾಗಿದೆ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎನ್ಎಂಸಿ ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ. ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಅಯ್ಯಣ್ಣ ಎಂಬುವವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕಾಗಿ ಪ್ರಲ್ಹಾದ ಜೋಶಿಯವರ ಕಚೇರಿಯ ಸಿಬ್ಬಂದಿಗೆ 2.5 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಕುಮಾರ್ ಎಂಬುವವರ ಬ್ಯಾಂಕ್ ಖಾತೆಗೆ 2021ರ ಜುಲೈನಲ್ಲಿ 2 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಉಳಿದ 50 ಲಕ್ಷ ರೂ. ನಗದು ರೂಪದಲ್ಲಿ ನೀಡಲಾಗಿದೆ. ಹರೀಶ್ ಅಯ್ಯಣ್ಣ ಅವರನ್ನು ಎನ್ಎಂಸಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾಗಿ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ. ಹರ್ಷವರ್ಧನ್ ಅವರು ಪ್ರಲ್ಹಾದ ಜೋಶಿಯವರಿಗೆ ಪತ್ರವನ್ನೂ ಬರೆದಿದ್ದರು ಎಂದು ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಕೇಂದ್ರ ಸಚಿವರ ಪತ್ರಗಳನ್ನು ತೋರಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಮ್ಮ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬದ ಕುರಿತು ಅತ್ಯಂತ ಲಘುವಾಗಿ ಮಾತನಾಡಿದ್ದಾರೆ. ಆದರೆ, ಅವರ ಕಚೇರಿಯಲ್ಲೇ ಲಂಚದ ಕಳ್ಳ ವ್ಯವಹಾರ ನಡೆದಿರುವ ಕುರಿತು ಏನು ಹೇಳುತ್ತಾರೆ? ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯಕ್ಕೆ ಗೊತ್ತಾಗಬೇಕು. ಪರಿಶುದ್ಧರು ಎಂದು ಹೇಳುವ ಅವರ ಭ್ರಷ್ಟಾಚಾರ ಇಲ್ಲಿದೆ. ಹಣಕ್ಕಾಗಿ ಕೇಂದ್ರ ಸಚಿವರ ಕಚೇರಿಯನ್ನು ಬಿಕರಿಗೆ ಇಡಲಾಗಿದೆ ಎಂದು ಆರೋಪ ಮಾಡಿದರು.