ಬೆಂಗಳೂರು:ಯಾರ ಮನಸ್ಸಲ್ಲೂ ಇಲ್ಲದ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ ರಾಮದಾಸ್ ಅವರು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮಮಂದಿರಕ್ಕೆ ದೇಣಿಗೆ ಕೊಡದ ಮನೆಗಳಿಗೆ ಮಾರ್ಕ್ ಮಾಡ್ತಾರೆಂಬ ಎಚ್ಡಿಕೆ ಆರೋಪ ವಿಚಾರವಾಗಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ. ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ. ಇದು ಜನತೆಗೆ ಗೊತ್ತಿರುವ ವಿಷಯ. ಮಹಾತ್ಮ ಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ RSS ನ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. RSS ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಬಿಡಿ ಎಂದು ಮನವಿ ಮಾಡಿದ್ದಾರೆ.