ಬೆಂಗಳೂರು: ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ಆರ್.ವಿ. ಹರೀಶ್ ರಾಜೀನಾಮೆ ನೀಡಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ವಿ. ಹರೀಶ್, ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಇವರು ಇದ್ದಕ್ಕಿದ್ದಂತೆ ಜೆಡಿಎಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹರೀಶ್ರನ್ನು ಅನರ್ಹ ಶಾಸಕ ಗೋಪಾಲಯ್ಯ ತಮ್ಮತ್ತ ಸೆಳೆದ್ರಾ ಎಂಬ ಅನುಮಾನವೂ ಮೂಡಿದೆ.
ಆರ್.ವಿ. ಹರೀಶ್ ರಾಜೀನಾಮೆ ಪತ್ರ ಟಿಕೆಟ್ ಸಿಗುವುದು ಅನುಮಾನ ಅಂತ ಗೊತ್ತಾಗುತ್ತಿದ್ದಂತೆ ಆರ್.ವಿ.ಹರೀಶ್ ಪಕ್ಷ ಬಿಟ್ಟಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಹರೀಶ್, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಕೆಲವರು ಪಕ್ಷವನ್ನು ಕುಟುಂಬದ ಆಸ್ತಿಯಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬ ರಾಜಕಾರಣ ಅತಿಯಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆಯಾಗಿದ್ದು, ಹಣವಂತರಿಗೆ ಮಣೆ ಹಾಕಲಾಗುತ್ತಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಪಕ್ಷದಲ್ಲಿ ಪ್ರಮುಖ ಹುದ್ದೆಯಲ್ಲಿದ್ದರೂ ನನ್ನ ಭಾವನೆಗಳಿಗೆ ಬೆಲೆ ಇಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸಮಾಡಬಹುದು, ಆದರೆ ಗುಲಾಮನಾಗಿ ಇರಲು ಸಾಧ್ಯವಿಲ್ಲ. ಪಕ್ಷದಲ್ಲಿನ ವಿದ್ಯಾಮಾನಗಳಿಂದ ನೊಂದಿದ್ದು, ನಾನು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.