ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಸ್ತ್ರೀ-ಸಾಮರ್ಥ್ಯ ಯೋಜನೆಯ 2ನೇ ಕಂತಿನ ವಿಶೇಷ ಸಮುದಾಯ ಬಂಡವಾಳ ನಿಧಿಯ ಎಸ್.ಎಸ್.ಜಿ ಫಲಾನುಭವಿಗಳಿಗೆ ಹಂಚಿಕೆ, ಆಟೋ ಮತ್ತು ಟ್ಯಾಕ್ಸಿ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಹಾಗೂ ಕುರಿಗಾಹಿ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ಸಾರಿಗೆ, ಪಶುಸಂಗೋಪನೆ ಇಲಾಖೆಗಳ ವಿವಿಧ ಯೋಜನೆಗಳಿಗೆ ಅವರು ಚಾಲನೆ ನೀಡಿದರು.
ಕುರಿಗಾಹಿ ಯೋಜನೆಗೆ ಚಾಲನೆ: ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ಇಂದು ಚಾಲನೆ ನೀಡಿದರು. 20 ಕುರಿ ಒಂದು ಮೇಕೆಯನ್ನು ಕೊಳ್ಳಲು ಪ್ರತಿಯೊಬ್ಬರಿಗೆ 1.31 ಲಕ್ಷ ರೂ. ನೀಡಿ, 20 ಸಾವಿರ ಕುರಿಗಾಹಿಗಳಿಗೆ ಯೋಜನೆ ತಲುಪಿಸುವ ಯೋಜನೆ ಇದಾಗಿದೆ.
ಇದೇ ವೇಳೆ ಮಾತನಾಡಿದ ಅವರು, ನೆಲೆಯಿಲ್ಲದ ಕುರಿಗಾಹಿಗಳಿಗೆ ಕಳೆದ ವರ್ಷ ಕುರಿ ದೊಡ್ಡಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಕುರಿ ಸತ್ತರೆ ಪರಿಹಾರ ನೀಡಲಾಗುತ್ತದೆ. ಇದೀಗ ಕುರಿಗಾಹಿ ಯೋಜನೆಯಡಿ ಕುರಿಗಾಹಿಗಳಿಗೆ 355 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ. ಕುರಿ ಉಣ್ಣೆ ಉತ್ಪಾದನೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಉತ್ಪಾದನೆಯನ್ನು ಮಾರುಕಟ್ಟೆಗೆ ಅಮೃತ್ ಕುರಿಗಾಹಿ ಯೋಜನೆ ಜೋಡಿಸುತ್ತದೆ. ಪೂರ್ಣ ಪ್ರಮಾಣದ ವ್ಯಾಪಾರಕ್ಕೆ 20 ಸಾವಿರ ಕುರಿಗಾಹಿಗಳಿಗೆ ಯೋಜನೆ ತಲುಪಿದೆ. ಇನ್ನೂ 50 ಸಾವಿರ ಕುರಿಗಾಹಿಗಳಿಗೆ ಯೋಜನೆಯ ಫಲ ನೀಡಲಾಗುವುದು ಎಂದರು.
ಗ್ರಾಮೀಣ ಭಾಗದ ಯುವಕರಿಗೆ ಕೈತುಂಬ ಕೆಲಸ: ಗ್ರಾಮೀಣ ಭಾಗದ ಯುವಕರು ಕೆಲಸವಿಲ್ಲದೇ ಇರಬಾರದು. ಎಲ್ಲರಿಗೆ ವಿದ್ಯೆ, ಎಲ್ಲರ ಕೈಗಳಿಗೆ ಕೆಲಸ ಕೊಡಬೇಕು. ಅವರು ದುಡಿಮೆ ಮಾಡಿ ಉತ್ತಮ ಚಾರಿತ್ರ್ಯವಂತರಾಗಿತ್ತಾರೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ತಿಳಿಸಿದರು.
ದುಡಿಮೆಗೆ ಯಾವ ನಾಡಿನಲ್ಲಿ, ದೇಶದಲ್ಲಿ ಗೌರವ ಇದೆ. ಆ ದೇಶ ಮತ್ತು ನಾಡಿನಲ್ಲಿ ಎಂದಿಗೂ ಬಡತನ ಇರುವುದಿಲ್ಲ. ಗ್ರಾಮೀಣ ಭಾಗದಲ್ಲಿನ ಜನರು ಎಲ್ಲರಿಗೂ ಕೆಲಸ ಕೊಡಬೇಕು. ಸ್ವಾಮಿ ವಿವೇಕಾನಂದರು ಶಕ್ತಿ ನಿಮ್ಮ ಒಳಗಡೆ ಇದೆ. ನೀವು ಏನು ಬೇಕಾದರೂ ಮಾಡಬಲ್ಲಿರಿ ಎಂದಿದ್ದಾರೆ. ದುಡಿಮೆಗೆ ಪ್ರೋತ್ಸಾಹ ನೀಡಲು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 12 ಸಾವಿರ ಯುವ ಸಂಘಗಳನ್ನು ರಚಿಸಿ ಅವರಿಗೆ ತರಬೇತಿ, ಉತ್ಪಾದನೆ, ಮಾರುಕಟ್ಟೆ, ಬ್ಯಾಂಕ್ ಸಹಾಯ ನೀಡಿ ಸ್ವಯಂ ಉದ್ಯೋಗಿಗಳಿಗೆ ನೆರವು ನೀಡಲಾಗುತ್ತಿದೆ. ನಮ್ಮ ಯುವಕರು ಕೈ ಚಾಚಬಾರದು ಅವರು ಕೊಡುವ ಕೈಯಾಗಬೇಕು. ಈ ರೀತಿಯ ಯೋಜನೆ ರಾಜ್ಯದಲ್ಲಿ ಈವರೆಗೆ ಇರಲಿಲ್ಲ. ಗ್ರಾಮೀಣ ಭಾಗದ ಯುವಕರು ನಿರುದ್ಯೋಗಗಳಾಗಿದ್ದು ಅಲ್ಲಿಯೇ ಸಂಘ ರಚಿಸಿ ಉತ್ಪಾದನೆ ಮಾಡಿದರೆ, ಅವರು ಈ ನಾಡು ಕಟ್ಟಲು ಮುಂದಾಗುತ್ತಾರೆ ಎಂದು ಸಿಎಂ ವಿವರಿಸಿದರು.