ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 2023-24ನೇ ಬಜೆಟ್ನಲ್ಲಿ ಘೋಷಿಸಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ನರೇಗಾ ಯೋಜನೆಯಡಿ 5000 ಗೋಮಾಳ ಪ್ರದೇಶಗಳು, 50 ಸಾವಿರ ಎಕರೆ ಹುಲ್ಲುಗಾವಲು ಪ್ರದೇಶಗಳು, 2 ಲಕ್ಷ ಬರ ಪರಿಹಾರ ಕಾಮಗಾರಿಗಳು, 81 ಸಾವಿರ ಪ್ರವಾಹ ನಿಯಂತ್ರಣ ಕಾಮಗಾರಿಗಳು ಹಾಗೂ 4268 ಭೂ ಕುಸಿತ ತಡೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. 27903 ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಶಾಂತಿಧಾಮಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. 5000 ಶಾಲಾ ಆವರಣಗಳನ್ನು ವಿದ್ಯಾಧಾಮಗಳನ್ನಾಗಿ ಉನ್ನತೀಕರಿಸುವುದು, 750 ಗ್ರಾಮ ಸಂತೆಗಳನ್ನು ಹಾಗೂ 27 ಸಾವಿರ ಕೊಳವೆಬಾವಿ ಪುನಶ್ಚೇತನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿದರು.
ನೀರು ಪೂರೈಕೆ ಕುರಿತು ವರದಿ ಸಲ್ಲಿಸಲು ಸೂಚನೆ: ವರುಣಾ ಕ್ಷೇತ್ರದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಎಷ್ಟು ಮನೆಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿವೆ ಎಂದು ಭೇಟಿ ನೀಡಿ, ಪರಿಶೀಲಿಸಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
ವಾರಾಂತ್ಯದಲ್ಲಿ ಗ್ರಂಥಾಲಯ ತೆರೆಯಿರಿ:ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ನೀಡಲಾಗುವ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಬೇಕು. ವಾರಾಂತ್ಯದಲ್ಲಿಯೂ ತೆರೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.