ಬೆಂಗಳೂರು :ಕಲ್ಯಾಣ ಕರ್ನಾಟಕದ ಅನುದಾನ ರಹಿತ ಖಾಸಗಿ ಶಾಲೆಗಳ ಕಲ್ಯಾಣವೇ ಆಗಿಲ್ಲ. ಆದರೆ, ಕಲ್ಯಾಣ ಕರ್ನಾಟಕ ಎಂಬ ಟ್ಯಾಗ್ ಲೈನ್‌ನ ಸರ್ಕಾರ ನೀಡಿದೆ ಎಂದು ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಶಾಲೆಗಳ ಅಭಿವೃದ್ಧಿ, ಅನುದಾನ ಬಿಡುಗಡೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಬಗ್ಗೆ ರೂಪ್ಸಾ ಸಂಘಟನೆ ಹಾಗೂ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಜಂಟಿ ಸುದ್ದಿಗೋಷ್ಠಿ ನಡೆಸಿವೆ. ಈ ವೇಳೆ ಮಾತಾನಾಡಿದ ಲೋಕೇಶ್ ತಾಳಿಕಟ್ಟೆ, 1947ರಲ್ಲಿಯೇ ಇದ್ದ ಸ್ಥಿತಿ ಇದ್ದು, 7 ಜಿಲ್ಲೆಗಳ ಸ್ಥಿತಿ ಶೋಚನೀಯವಾಗಿದೆ.
200 ವರ್ಷಗಳವರೆಗೂ ನಾವು ನಿಜಾಮರ ಆಡಳಿತಕ್ಕೆ ಒಳಗಾಗಿದ್ದೆವು. ನಮ್ಮ ಆಡು ಭಾಷೆ ಕನ್ನಡವಾಗಿತ್ತು. ನಮ್ಮ ಆಡಳಿತ ಭಾಷೆ ಉರ್ದು ಆಗಿತ್ತು. ಆಡಳಿತ ಭಾಷೆ, ಆಡು ಭಾಷೆ ಮಧ್ಯೆ ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಹಾಗಾಗಿ, ಶೈಕ್ಷಣಿಕವಾಗಿ ಮೂಲವಾಹಿನಿಗೆ ಬರಲಾಗಲಿಲ್ಲ. 20 ಸಾವಿರ ಶಿಕ್ಷಕರನ್ನು ನೇಮಿಸುವುದಾಗಿ ಸಚಿವರು ಹೇಳಿದ್ದಾರೆ.
ನಾಲ್ಕು ಬಾರಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. 371ಜೆ ಅಡಿ ಖಾಸಗಿ ಶಾಲಾ ಸಂಸ್ಥೆಗಳಿಗೆ ಅನುದಾನ ನೀಡುವಂತೆ ಒತ್ತಾಯ ಮಾಡುತ್ತಿದ್ದೇವೆ. 371 ಜೆ ಬಂದು 7 ವರ್ಷ ಆಗಿದ್ದು, ಇದರಡಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಒಂದು ರೂಪಾಯಿ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಬಳಿಕ ಮಾತಾನಾಡಿದ ಸುನೀಲ್ ಹೂಡ್ಗಿ, ನಮ್ಮ ಬೇಡಿಕೆಯನ್ನಿಟ್ಟುಕೊಂಡು ಮೊದಲ ಬಾರಿ ರಾಜಧಾನಿಗೆ ಬಂದಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳು 1995-2021ರವರೆಗೂ ಹೋರಾಟ ಮುಂದುವರೆಸಿವೆ. 2015ರವರೆಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡಬೇಕಿದ್ದ ಅನುದಾನವನ್ನು ಆದಷ್ಟು ಬೇಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.