ಬೆಂಗಳೂರು :ಯಾವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ರೋಗ ಲಕ್ಷಣ ಕಂಡು ಬರುತ್ತದೆಯೋ ಆ ಶಾಲೆಗಳಿಗೆ ಮಾತ್ರ ಕೆಲ ದಿನಗಳವರೆಗೆ ರಜೆ ನೀಡಿ ಮುಂಜಾಗ್ರತೆ ವಹಿಸಬೇಕು ಎಂಬುದು ಪ್ರಧಾನಿಯವರ ಉದ್ದೇಶವಾಗಿತ್ತು.
ಆದರೆ, ನಮ್ಮ ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರಗಳಲ್ಲಿ ರೋಗದ ಪ್ರಮಾಣ ಶೇ.5ರಷ್ಟು ಕಂಡು ಬಂದರೂ ರೋಗಲಕ್ಷಣ ಇಲ್ಲದ ಇತರ ಭಾಗಗಳಿಗೂ ಅನ್ವಯವಾಗುವಂತೆ ಶಾಲೆಗಳಿಗೆ ರಜೆ ಘೋಷಿಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ರೂಪ್ಸಾ ಸಂಘದ ಲೋಕೇಶ್ ತಾಳೀಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ ಬಾಗಿಲು ಬಂದ್ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, 5ರ ನಂತರದ ತರಗತಿಗಳನ್ನಾದರೂ ನಡೆಸಲು ಅವಕಾಶ ಕೊಡುವಂತೆ ಪತ್ರ ಬರೆದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 6ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಕೇವಲ 2 ತಿಂಗಳು ಭೌತಿಕ ತರಗತಿಗಳು ನಡೆದಿವೆ.
ಉಳಿದ 17 ತಿಂಗಳು ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಮರೀಚಿಕೆ ಆಗಿದೆ. ಅವರ ಮುಂದಿನ ಭವಿಷ್ಯ ಶೂನ್ಯ ಆಗುವ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿವೆ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.