ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶಾಲೆಗಳನ್ನು ಪ್ರಾರಂಭಿಸುವಂತೆ ರುಪ್ಸಾ ಒತ್ತಾಯಿಸಿದೆ. ಈ ಸಂಬಂಧ ರುಪ್ಸಾ ಸಂಘಟನೆ ಸಿಎಂಗೆ ಪತ್ರ ಬರೆದಿದೆ.
ಜನವರಿ 6 ರಿಂದ ಕೋವಿಡ್ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದೆ ಎಂಬ ಕಾರಣ ನೀಡಿ ಬೆಂಗಳೂರು ನಗರ ಹಾಗು ಗ್ರಾಮೀಣ ಜಿಲ್ಲಾ ಪ್ರದೇಶದ ಶಾಲೆಗಳ ಭೌತಿಕ ತರಗತಿಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ ಆನ್‌ಲೈನ್ ಶಿಕ್ಷಣ ನೀಡಬೇಕೆಂದು ಆದೇಶ ನೀಡಿದ್ದೀರಿ. ಇದು ಕೇವಲ ದೊಡ್ಡ ಶಾಲೆಗಳಿಗೆ ಮಾತ್ರ ಅನುಕೂಲವಾಗುತ್ತದೆ. ಕಾರಣ ಅಲ್ಲಿ ಕಲಿಯುವಂತಹ ಮಕ್ಕಳು ಆನ್‌ಲೈನ್ ತರಗತಿಗೆ ಪೂರಕವಾಗುವಂಥ ಪರಿಕರಗಳನ್ನು ಹೊಂದಿರುತ್ತಾರೆ.
ಉಳಿದ ಬಜೆಟ್ ಅಥವಾ ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಬಳಿ ಆನ್‌ಲೈನ್ ಪಾಠ ಕೇಳುವಂತಹ ಪರಿಕರಗಳು ಇಲ್ಲದೆ ಇರುವ ವಿಚಾರ ತಮಗೂ ತಿಳಿದಿದೆ. ಆ ಮಕ್ಕಳ ವಿದ್ಯಾಭ್ಯಾಸ ಸತತವಾಗಿ ಕಳೆದ ಎರಡು ವರ್ಷದಿಂದ ಮರೀಚಿಕೆಯಾಗಿದೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾಳೆ ಸಿಎಂ ಜನ್ಮದಿನ.. ನಾಡಿನ ಜನತೆಗೆ ಬರ್ತ್ಡೇ ಗಿಫ್ಟ್ ಕೊಡೋ ಬಗ್ಗೆ ಏನಂದ್ರು ಗೊತ್ತಾ?
ಇದೇ ರೀತಿಯ ಶಾಲಾ ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿದರೆ, ಮುಂದೆ ಅವರ ಶೈಕ್ಷಣಿಕ ಬದುಕು ನಾಶವಾಗುತ್ತದೆ. ಆದ್ದರಿಂದ ನಾವೆಲ್ಲರೂ ಕೊರೊನಾ ಜೊತೆ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಇದೆ. ದಯಮಾಡಿ ಬಡ ಮಕ್ಕಳ ಶಿಕ್ಷಣಕ್ಕೆ ಭಂಗಬಾರದ ರೀತಿ ನಿಯಮಗಳನ್ನು ರೂಪಿಸಿ ಅವರಿಗೆ ವಿದ್ಯಾಗಮ ರೂಪದಲ್ಲಾದರೂ ಶಿಕ್ಷಣ ಸಿಗುವಂತೆ ಮಾಡಿ. ಈ ನಿಟ್ಟಿನಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಪರೀಕ್ಷೆ ಹತ್ತಿರವಾಗುತ್ತಿದೆ. ಸೋಂಕು ಹೆಚ್ಚಾದ್ರು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಹೀಗಾಗಿ ಬೆಂಗಳೂರಿನಲ್ಲೂ ಶಾಲೆ ಪ್ರಾರಂಭಿಸಿ. ನೀವು ಶಾಲೆ ಪ್ರಾರಂಭಕ್ಕೆ ಅನುಮತಿ ಕೊಡದೇ ಹೋದ್ರೆ, ನಾವೇ ಶಾಲೆ ಪ್ರಾರಂಭಿಸುತ್ತೇವೆ. ಸೋಮವಾರದಿಂದ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ