ಬೆಂಗಳೂರು: ಮಾಧ್ಯಮಗಳ ಎದುರು ಮಾತಾಡಬಾರದು ಅಂದುಕೊಂಡಿದ್ದೆ. ಆದರೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಂದು ದೂರು ಕೊಟ್ಟಿದ್ದಾರೆ. ನಾನು ಈಗಾಗಲೇ ಸರ್ಕಾರಕ್ಕೆ ಇದೆಲ್ಲದರ ಬಗ್ಗೆ ಗಮನಕ್ಕೆ ತಂದಿದ್ದೇನೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮುಖ್ಯಕಾರ್ಯದರ್ಶಿ ಅವರಿಗೆ ದೂರು ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೋಟೋಗಳು ವೈಯಕ್ತಿಕ ಆಗಲ್ಲ. ಯಾರು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅದೂ ಹೊರಗೆ ಬರಬೇಕು. ರೋಹಿಣಿ ಸಿಂಧೂರಿ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಅದನ್ನು ಮರು ತನಿಖೆಗೆ ಅನುಮತಿ ಕೊಡುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಅವರ ಜಾಲಹಳ್ಳಿ ಮನೆ ಬಗ್ಗೆ ರೋಹಿಣಿ ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಅದರ ತನಿಖೆಗೂ ಮನವಿ ಮಾಡುತ್ತೇನೆ. ರೋಹಿಣಿ ಅವರಿಗೆ ಯಾವ ಶಕ್ತಿ ತಡೆಯುತ್ತಿದೆಯೋ ಗೊತ್ತಿಲ್ಲ ಎಂದರು. ರೋಹಿಣಿ ಅವರ ವಿರುದ್ಧ ಯಾವ ಪ್ರಕರಣದಲ್ಲೂ ಕ್ರಮ ಆಗಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಚಾರ ಇಲ್ಲ ಎಂದು ಡಿ.ರೂಪಾ ಸ್ಪಷ್ಟಪಡಿಸಿದರು.
ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ದೂರು:ತನ್ನ ವಿರುದ್ಧ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಆಧಾರರಹಿತ, ಸುಳ್ಳು ಮತ್ತು ವೈಯಕ್ತಿಕ ಆರೋಪಗಳನ್ನು ಮಾಡಿ ಸೇವಾ ನಿಯಮ ಉಲ್ಲಂಘಿಸಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ರೂಪಾ ಮಾಡಿರುವ ಆರೋಪದ ಲಿಂಕ್ಗಳನ್ನು ಕೂಡ ದೂರಿನಲ್ಲಿ ಲಗತ್ತಿಸಿದ್ದಾರೆ. ನಾಲ್ಕು ಪುಟಗಳ ದೂರಿನಲ್ಲಿ ರೂಪಾ ಮಾಡಿರುವ ಆರೋಪಗಳ ಬಗ್ಗೆ ಸಿಂಧೂರಿ ಸ್ಪಷ್ಟೀಕರಣ ನೀಡಿದ್ದಾರೆ.