ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ತಮ್ಮ ಅಪೇಕ್ಷೆ ವ್ಯಕ್ತಪಡಿಸಿ ರಾಜ್ಯಾಧ್ಯಕ್ಷ ಕುರ್ಚಿಗೆ ಕರ್ಚೀಫ್ ಹಾಕುತ್ತಿದ್ದಾರೆ. ಆದರೆ ರಾಜ್ಯಾಧ್ಯಕ್ಷರ ಅವಧಿ ಮುಕ್ತಾಯದ ದಿನಾಂಕದ ಬಗ್ಗೆ ಬಿಜೆಪಿಯಲ್ಲೇ ಗೊಂದಲ ಮೂಡಿದೆ.
ಮೂರು ವರ್ಷದ ಅವಧಿ ಮುಗಿದ ನಂತರ ಸಹಜವಾಗಿ ಹೊಸಬರ ನೇಮಕವಾಗಲಿದೆ ಎಂದು ಯಡಿಯೂರಪ್ಪ ಆದಿಯಾಗಿ ಎಲ್ಲಾ ನಾಯಕರು ಹೇಳುತ್ತಿದ್ದರೆ ನನ್ನ ಅವಧಿ ಮುಗಿದಿಲ್ಲ ಎಂದು ಕಟೀಲ್ ಹೇಳುತ್ತಿದ್ದಾರೆ. ಈ ಎಲ್ಲದರ ನಡುವೆ ಹಲವು ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಗೆ ಬಂದಿದ್ದು ಚರ್ಚೆಯ ಕಾವು ಹೆಚ್ಚುವಂತೆ ಮಾಡಿದೆ.
ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಕದ ವಿಷಯ ಕೇಸರಿಪಡೆಯಲ್ಲಿ ತೀವ್ರ ಚರ್ಚಿತ ವಿಷಯವಾಗಿದೆ. 2019 ರ ಆಗಸ್ಟ್ 20 ರಂದು ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿತ್ತು. ಆದರೆ, ಪಕ್ಷದ ನಿಯಮದಂತೆ ಚುನಾಯಿತ ಅಧ್ಯಕ್ಷರಾಗಿ ಕಟೀಲ್ ಆಯ್ಕೆಯಾಗಿದ್ದು, 2020ರ ಜನವರಿ 16 ರಂದು. ಅಂದು ನಡೆದ ರಾಜ್ಯಾಧ್ಯಕ್ಷರ ಚುನಾವಣೆಗೆ ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರ ಆಯ್ಕೆಯನ್ನು ಅವಿರೋಧವಾಗಿ ಪ್ರಕಟಿಸಲಾಯಿತು. ಮೂರು ವರ್ಷದ ಅವಧಿಗೆ ಕಟೀಲ್ ನೇಮಕವನ್ನು ಪ್ರಕಟಿಸಲಾಯಿತು. ಅಂದೇ ಅರಮನೆ ಮೈದಾನದಲ್ಲಿ ಸಮಾರಂಭ ನಡೆಸಿ ಮುಂದಿನ ಮೂರು ವರ್ಷ ಕಟೀಲ್ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ, ಪಕ್ಷವನ್ನು ಕಟ್ಟುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಘೋಷಿಸಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ್ದ ಕಟೀಲ್, ಮುಂದಿನ ಮೂರು ವರ್ಷದ ಅವಧಿಗೆ ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು 2020ರ ಜನವರಿ 16 ರಂದು ವೇದಿಕೆ ಮೇಲಿನ ಭಾಷಣದಲ್ಲಿ ಹೇಳಿದ್ದರು.
ಇನ್ನೂ ನನ್ನ ಅವಧಿ ಮುಗಿದಿಲ್ಲ: ಪಕ್ಷದ ನಿಯಮದ ಪ್ರಕಾರ ಕಟೀಲ್ ಅವಧಿ 2023 ರ ಜನವರಿ 15 ರವರೆಗೂ ಇದೆ. ಸಂಕ್ರಾಂತಿಯ ಪರ್ವಕಾಲದವರೆಗೂ ಕಟೀಲ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ಅವಕಾಶವನ್ನು ಪಕ್ಷದ ಸಂವಿಧಾನದಂತೆ ಪಡೆದುಕೊಂಡಿದ್ದಾರೆ. ಹಾಗಾಗಿಯೇ ನಳಿನ್ ಕುಮಾರ್ ಕಟೀಲ್ ನನ್ನ ಅವಧಿ ಇನ್ನೂ ಮುಗಿದಿಲ್ಲ ಎಂದಿದ್ದಾರೆ. ವಾಸ್ತವದಲ್ಲಿ ಕಟೀಲ್ ಹೇಳುತ್ತಿರುವುದು ಸತ್ಯವೇ. ಅವರ ಅವಧಿ ಇನ್ನೂ ಮುಗಿದಿಲ್ಲ. ಅವರಿಗೆ ಇನ್ನು ಐದು ತಿಂಗಳ ಅವಕಾಶ ಇದೆ. ಒಂದು ವೇಳೆ ಅವರ ಅವಧಿ ಮುಗಿದಿದ್ದರೆ ಅವರನ್ನು ಮತ್ತಷ್ಟು ಸಮಯ ಮುಂದುವರೆಸುವ ಆದೇಶವನ್ನು ಹೈಕಮಾಂಡ್ ಹೊರಡಿಸಬೇಕಿತ್ತು. ಇಲ್ಲವೇ ಹೊಸಬರ ನೇಮಕ ಮಾಡಬೇಕಾಗಿತ್ತು. ಆದರೆ, ಇನ್ನು ಐದು ತಿಂಗಳು ಸಮಯಾವಕಾಶವಿರುವುದರಿಂದಲೇ ಹೈಕಮಾಂಡ್ ಅಂತಹ ಯಾವುದೇ ಹೆಜ್ಜೆ ಇಟ್ಟಿಲ್ಲ.
ಸದ್ಯಕ್ಕೆ ಕಟೀಲ್ ಸ್ಥಾನ ಅಬಾಧಿತವಾದರೂ ಅದು ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಅವಲಂಬಿಸಿರಲಿದೆ. ಯಾವುದೇ ರಾಜ್ಯಾಧ್ಯಕ್ಷರನ್ನು ಯಾವಾಗ ಬೇಕಾದರೂ ಬದಲಾವಣೆ ಮಾಡುವ ಅವಕಾಶ ಹೈಕಮಾಂಡ್ಗಿದೆ. ಹಾಗಾಗಿಯೇ ಈಗ ರಾಜ್ಯಾಧ್ಯಕ್ಷರ ಬದಲಾವಣೆ ವಿಷಯ ಚರ್ಚೆಗೆ ಬಂದಿದೆ. ಆದರೆ, ಐದು ತಿಂಗಳ ಮೊದಲೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ, ಚುನಾವಣಾ ವರ್ಷ ಎನ್ನುವ ಕಾರಣಕ್ಕೆ ಬದಲಾವಣೆ ಮಾಡಲು ಮುಂದಾದರೆ ಮಾತ್ರ ಅಂತಹ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿರುವ ಹೆಸರುಗಳು:ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಹಿರಿಯ ನಾಯಕರ ಹೆಸರುಗಳು ಕೇಳಿಬಂದಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಚಿವ ಸುನೀಲ್ ಕುಮಾರ್ ಹೆಸರುಗಳು ಆಗಾಗ ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹೆಸರು ಸಹ ಕೇಳಿಬರುತ್ತಿದೆ.
ಕಟ್ಟರ್ ಹಿಂದುತ್ವವಾದಿ, ಪಕ್ಷವನ್ನು ಮೊದಲಿನಿಂದಲೇ ಸಮರ್ಥಿಸಿಕೊಂಡು ಬರುತ್ತಿರುವ ನಾಯಕ, ಪಕ್ಷದ ಅಜೆಂಡಾದಂತೆ ನಡೆದುಕೊಳ್ಳುವ ಕಲೆ ಕರಗತವಾಗಿದೆ. ಹಿಂದುತ್ವ ಅಜೆಂಡಾದ ಮಾಲ್ ಇಮೇಜ್ ಇರುವ ಕಾರಣಕ್ಕೆ ಸಿ.ಟಿ ರವಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪ ಆಪ್ತ ಬಳಗದಲ್ಲಿದ್ದವರು. ಮಹಿಳೆಗೆ ಅವಕಾಶ ಕಲ್ಪಿಸಬೇಕು ಎಂದು ಪರಿಗಣಿಸಿದಲ್ಲಿ ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ಅನುಭವಿ ರಾಜಕಾರಣಿ ಆಗಿದ್ದಾರೆ. ಹಾಗಾಗಿ ಅವರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.
ಅತ್ಯುತ್ತಮ ಸಂಘಟನಾ ಚತುರನಾಗಿರುವ ಕಾರಣಕ್ಕೆ ಅರವಿಂದ ಲಿಂಬಾವಳಿ ಅವರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎನ್ನಲಾಗುತ್ತಿದೆ. ಕಟೀಲ್ ನೇಮಕದ ಸಮಯದಲ್ಲೇ ಲಿಂಬಾವಳಿ ಹೆಸರು ಕೇಳಿಬಂದಿತ್ತು. ಹಾಗಾಗಿ ಅವರಿಗೆ ಈಗ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಇನ್ನು ಸರಳ ಸಜ್ಜನಿಕ, ಸಂಘದ ಹಿನ್ನೆಲೆ, ಸುಸಂಸ್ಕೃತ ರಾಜಕಾರಣಿಯಾಗಿ ಕ್ಲೀನ್ ಇಮೇಜ್ ಇರಿಸಿಕೊಂಡಿರುವ ಕಾರಣಕ್ಕೆ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಸಚಿವ ಸುನೀಲ್ ಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿಜಯೇಂದ್ರ ಹೆಸರನ್ನು ಮಾತ್ರ ಪಕ್ಷದಲ್ಲಿ ಅಷ್ಟಾಗಿ ಚರ್ಚಿಸಿಲ್ಲ. ಆದರೆ, ಅವರೂ ರೇಸ್‌ನಲ್ಲಿ ಇರುವುದಂತೂ ಸತ್ಯ.