ಬೆಂಗಳೂರು: ಕೋವಿಡ್-19 ಸೋಂಕು ಹಿನ್ನೆಲೆ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ ಕಡಿಮೆಯಾಗಿರುವುದರಿಂದ ಪ್ರಸ್ತುತ ವರ್ಷಕ್ಕೆ ಸೀಮಿತಗೊಳಿಸಿ ಎಸ್ಎಸ್ ಎಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತ ನಿಯಮಗಳಲ್ಲಿ ವಿನಾಯ್ತಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಶಾಲೆಗಳು ತಡವಾಗಿ ಆರಂಭವಾಗಿರುವುದು ಮತ್ತು ಮಕ್ಕಳ ಶಾಲಾ ಹಾಜರಾತಿಯನ್ನು ಪೋಷಕರು - ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟು ಪ್ರಸ್ತುತ ವರ್ಷ ಹಾಜರಾತಿ ಕಡ್ಡಾಯವಲ್ಲ ಎಂದು ಶಿಕ್ಷಣ ಇಲಾಖೆಯೇ ಆದೇಶಿದೆ. ಈ ಹಿನ್ನೆಲೆ ಖಾಸಗಿ ಅನುದಾನರಹಿತ ಶಾಲೆಗಳ ಹಿತದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತು ನಿಯಮದಲ್ಲಿ ಸಡಿಲಿಕೆ ಮಾಡಿ ವಿನಾಯ್ತಿ ನೀಡಬೇಕೆಂದು ಸಚಿವರು ಸೂಚಿಸಿದ್ದಾರೆ.
ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಾಖಲಾತಿ ಮತ್ತು ಹಾಜರಾತಿಗಳ ಆಧಾರದಲ್ಲಿ ಶಾಲೆಗಳ ಮಾನ್ಯತೆ ನವೀಕರಿಸುವ ಮೂಲಕ ವಿದ್ಯಾರ್ಥಿಗಳ ಆರ್ಟಿಇ ಶುಲ್ಕ ಮರುಪಾವತಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಬರೆಯಲು ಅವಕಾಶಗಳನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸಾಮಾನ್ಯ ಪ್ರಕ್ರಿಯೆಗಳಾಗಿವೆ.