ಬೆಂಗಳೂರು:ಹಿಂದೂ ಸಂಘಟನೆ ಕಾರ್ಯಕರ್ತ ರುದ್ರೇಶ್ ಹತ್ಯೆಯ ಪ್ರಮುಖ ಆರೋಪಿ ಮೊಹಮ್ಮದ್ ಗೌಸ್ ನಯಾಝಿ (41) ಗಾಗಿ ತೀವ್ರ ಹುಡುಕಾಟ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆತನ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ಘೋಷಿಸಿದೆ.
2016 ರ ಅ.16ರಂದು ಬೆಳಗ್ಗೆ 9ಕ್ಕೆ ಶಿವಾಜಿನಗರದ ಕಾಮರಾಜ ರಸ್ತೆಯ ಶ್ರೀನಿವಾಸ ಮೆಡಿಕಲ್ ಸ್ಟೋರ್ ಮುಂಭಾಗದಲ್ಲಿ ಸ್ನೇಹಿತರೊಂದಿಗೆ ನಿಂತಿದ್ದ ರುದ್ರೇಶ್ ಅವರನ್ನು 2 ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಆರ್‌ಟಿ ನಗರ ಎರಡನೇ ಬ್ಲಾಕ್ ನ ನಿವಾಸಿಯಾಗಿದ್ದ ಮೊಹಮ್ಮದ್ ಗೌಸ್ ನಯಾಝಿ ಅಲಿಯಾಸ್ ಗೌಸ್ ಭಾಯ್ ಎಂಬಾತನಿಗೆ ಹಲವು ವರ್ಷಗಳಿಂದ ಶೋಧ ನಡೆಸುತ್ತಿದೆ.
ಪ್ರಕರಣದಲ್ಲಿ ಶಾಮೀಲಾಗಿದ್ದರು ಎನ್ನಲಾದ ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾರೆ. ಆದರೆ, ಮೊಹಮ್ಮದ್ ಗೌಸ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಸುಳಿವೂ ಸಿಕ್ಕಿಲ್ಲ. ಆದ್ದರಿಂದ ಮೊಹಮ್ಮದ್ ಗೌಸ್ ನಯಾಝಿ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಜೊತೆಗೆ ಆತನ ಸುಳಿವು ಸಿಕ್ಕಿದರೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
2021ರಲ್ಲಿ ಆರೋಪಿಗಳ ಜಾಮೀನು ತಿರಸ್ಕರಿಸಿದ್ದ ವಿಶೇಷ ಕೋರ್ಟ್:ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ಬಂಧಿತರಾಗಿದ್ದ ಒಂದನೇ ಆರೋಪಿ ಇರ್ಫಾನ್ ಪಾಷಾ ಹಾಗೂ ನಾಲ್ಕನೇ ಆರೋಪಿ ಮೊಹಮ್ಮದ್ ಮುಜೀಬ್ ಉಲ್ಲಾ ಅರ್ಜಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯನ್ನು ಎನ್ಐಎ ವಿಶೇಷ ನ್ಯಾಯಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ಕೈಗೆತ್ತಿಕೊಂಡಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಯಾರೋ ಅಪರಿಚಿತ ದುಷ್ಕರ್ಮಿಗಳು ಮೋಟರ್ ಬೈಕ್ನಲ್ಲಿ ಬಂದು ರುದ್ರೇಶ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಆದರೆ, ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ, ಆಧಾರವಿಲ್ಲದಿದ್ದರೂ ಅರ್ಜಿದಾರರನ್ನು ಎನ್ಐಎ ಅಧಿಕಾರಿಗಳು 2016ರ ಅಕ್ಟೋಬರ್ 27ರಂದು ಬಂಧಿಸಿದ್ದಾರೆ. ಅಧಿಕಾರಿಗಳು ಆರೋಪಿಸಿರುವಂತೆ ಅವರು ಪಿಎಫ್ಐ ಸದಸ್ಯರೂ ಅಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದರು.
ಎನ್ಐಎ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಆರೋಪಿಗಳು ಆರ್ ಎಸ್ಎಸ್ ಪಥಸಂಚಲನದ ವೇಳೆ ಕನಿಷ್ಠ ಇಬ್ಬರು ಕಾರ್ಯಕರ್ತರನ್ನು ಕೊಲ್ಲುವ ಉದ್ದೇಶದೊಂದಿಗೆ ಸಾಕಷ್ಟು ಸಭೆ ನಡೆಸಿದ್ದರು. ಅದರಂತೆ ಪೂರ್ವಯೋಜಿತ ತಯಾರಿ ಮಾಡಿ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಎನ್ಐಎ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಅಲ್ಲದೇ, ಆರೋಪಿಗಳಿಗೆ ಈ ಹಿಂದೆಯೂ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಜಾಮೀನು ನಿರಾಕರಿಸಿವೆ. ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು. ಹೀಗಾಗಿ ನ್ಯಾಯಾಲಯ ವಾದ ಪ್ರತಿವಾದ ಆಲಿಸಿ ಎನ್ಐಎ ಪರ ವಿಶೇಷ ಅಭಿಯೋಜಕರ ವಾದವನ್ನು ಪುರಸ್ಕಿರಿದ್ದ ನ್ಯಾಯಾಲಯ ಜಾಮೀನನ್ನು ನಿರಾಕರಿಸಿತ್ತು.
ಇದನ್ನೂ ಓದಿ:ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಪೊಲೀಸ್ ಕಸ್ಟಡಿ: ಯೂಟ್ಯೂಬರ್ ಆಗಿದ್ದ ಶಾರುಖ್ ಸೈಫಿ