ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಶಿಫಾರಸು ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸದಸ್ಯ ಸ್ಥಾನಕ್ಕೆ ರುದ್ರೇಗೌಡ ಅವರನ್ನು ನೇಮಿಸಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
ಓದಿ: ರಕ್ಷಣಾ ಸಿಬ್ಬಂದಿ ಮಿಸೈಲ್ ಫೈರ್ ಪ್ರಕ್ರಿಯೆ ಹೇಗಿರುತ್ತೆ.. ಇಲ್ಲಿದೆ ಸಂಪೂರ್ಣ ವಿವರ..
ರುದ್ರೇಗೌಡರ ನೇಮಕ ಪ್ರಶ್ನಿಸಿ ಜಲಮಂಡಳಿಯ ಎಸ್ಸಿ-ಎಸ್ಟಿ ನೌಕರರ ಕಲ್ಯಾಣ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯದ ಹಿಂದಿನ ಸೂಚನೆಯಂತೆ ಸರ್ಕಾರದ ಪರ ವಕೀಲರು ರುದ್ರೇಗೌಡ ಅವರ ನೇಮಕಾತಿಯ ಮೂಲ ಕಡತವನ್ನು ಪೀಠಕ್ಕೆ ಸಲ್ಲಿಸಿದರು.
ಕಡತ ಪರಿಶೀಲಿಸಿದ ಪೀಠ, ಕೇಂದ್ರ ಸಚಿವ ಡಿ.ವಿ.ಸದಾದನಂದಗೌಡ ಅವರ ಶಿಫಾರಸಿನಂತೆ ಜಲಮಂಡಳಿ ಸದಸ್ಯ ಹುದ್ದೆಗೆ ರುದ್ರೇಗೌಡ ಅವರನ್ನು ನೇಮಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಕಾನೂನು ಪ್ರಕಾರ ಈ ಹುದ್ದೆಗೆ ನೇಮಕವಾಗುವವರಿಗೆ ವಾಣಿಜ್ಯ ಮತ್ತು ಆಡಳಿತ ಕ್ಷೇತ್ರದ ಅನುಭವ ಇರಬೇಕು. ಆದರೆ ರುದ್ರೇಗೌಡ ನೇಮಕಕ್ಕೆ ಮುನ್ನ ಅರ್ಹತೆ ಪರಿಶೀಲಿಸಿದ ಬಗ್ಗೆ ಸರ್ಕಾರದ ಆದೇಶದಲ್ಲಿ ಉಲ್ಲೇಖವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ, ಕೇಂದ್ರ ಸಚಿವರ ಶಿಫಾರಸಿನಂತೆ ಮುಖ್ಯಮಂತ್ರಿಗಳು ರುದ್ರೇಗೌಡ ಅವರನ್ನು ನೇಮಿಸಿದ್ದಾರೆ. ಇದೊಂದೇ ಕಾರಣಕ್ಕೆ ಅವರ ನೇಮಕ ಆದೇಶ ರದ್ದುಪಡಿಸಬಹುದು ಎಂದು ಅಭಿಪ್ರಾಯಪಟ್ಟ ಪೀಠ, ಕೇಂದ್ರ ಸಚಿವರನ್ನೂ ಪ್ರಕರಣದಲ್ಲಿ ಪ್ರತಿವಾದಿ ಮಾಡುವುದಾಗಿ ಎಚ್ಚರಿಕೆ ನೀಡಿತು.
ನಂತರ ಈ ನೇಮಕದಲ್ಲಿ ಕೇಂದ್ರ ಸಚಿವರ ಪಾತ್ರ ಮತ್ತು ನೇಮಕಾತಿ ಪ್ರಕ್ರಿಯೆಗೆ ಅರ್ಹತೆ ಪರಿಗಣಿಸಲಾಗಿದೆಯೇ ಎಂಬ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿ, ವಿಚಾರಣೆಯನ್ನು ಫೆ. 12ಕ್ಕೆ ಮುಂದೂಡಿತು.