ಬೆಂಗಳೂರು: ರಾಜ್ಯದ ಪ್ರತಿ ಗ್ರಾಮದಲ್ಲಿಯೂ ರುದ್ರಭೂಮಿ ಇರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ತಳವಾರ ಸಾಬಣ್ಣ ಅವರ ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮಕ್ಕೆ ರುದ್ರಭೂಮಿ ಇಲ್ಲ. ಶವಸಂಸ್ಕಾರಕ್ಕೆ ಜಾಗವಿಲ್ಲದೆ ದೇಹದಾನ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಂಕೂರು ಗ್ರಾಮದಲ್ಲಿ 23 ಎಕರೆ ಸರ್ಕಾರಿ ಜಮೀನಿದೆ, ಜವಳು ಇರುವ ಕಾರಣ ಅಲ್ಲಿ ಬಳಕೆ ಮಾಡಲು ಆಗುತ್ತಿಲ್ಲ. ಹಾಗಾಗಿ ಪಟ್ಟಾದಾರರ 4 ಎಕರೆ ಜಮೀನು ನೇರ ಖರೀದಿ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ರಾಜ್ಯದ 21,336 ಗ್ರಾಮಗಳಲ್ಲಿ ರುದ್ರಭೂಮಿ ಲಭ್ಯವಿದೆ. ಆದರೆ 7,069 ಗ್ರಾಮಕ್ಕೆ ರುದ್ರಭೂಮಿ ಲಭ್ಯವಿಲ್ಲ. ಆದಷ್ಟು ಬೇಗ ಅಲ್ಲಿ ರುದ್ರುಭೂಮಿ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರತಿ ಹಳ್ಳಿಯಲ್ಲೂ ಸ್ಮಶಾನವಿರಬೇಕು ಎನ್ನುವುದು ನನ್ನ ಆದ್ಯತೆ ಆಗಿದೆ. ಹಾಗಾಗಿ ಎಲ್ಲೇ ಹೋದರೂ ನನ್ನ ಮೊದಲ ಪ್ರಶ್ನೆ ರುದ್ರಭೂಮಿಗೆ ಜಾಗ ಇದೆಯಾ ಎಂದು ಕೇಳುವುದೇ ಆಗಿದೆ, ಎಲ್ಲಾ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರೈತರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ, ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಆದರೆ ರೈತರು ಆತ್ಮಹತ್ಯೆಯಂಥ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿದರು.
ಚಂದ್ರಶೇಖರ ಪಾಟೀಲ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆತ್ಯಹತ್ಯೆ ಮಾಡಿಕೊಂಡ ರೈತರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಲ ಬಾಧೆಯಿಂದ 366 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿ 64, ಬೀದರ್ 100, ರಾಯಚೂರು 10, ಯಾದಗಿರಿ 21, ಗುಲ್ಬರ್ಗಾ 62, ಕೊಪ್ಪಳ 109 ಸೇರಿ 366 ಆತ್ಮಹತ್ಯೆ ನಡೆದಿದೆ. ಇದರಲ್ಲಿ 357 ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದರು.