ಬೆಂಗಳೂರು: ಕನ್ನಡ ಚಿತ್ರರಂಗದ ನಟ ನಾಗಭೂಷಣ್ ಅವರ ಕಾರು ಅಪಘಾತದಿಂದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳ ವರದಿ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರ ಕೈ ಸೇರಿದೆ.
ಆರ್.ಟಿ.ಒ ಅಧಿಕಾರಿಗಳಿಂದ ಪೊಲೀಸರಿಗೆ ವರದಿ ಸಲ್ಲಿಕೆ:ಅಪಘಾತದ ಬಳಿಕ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ನಟ ನಾಗಭೂಷಣ್ ಅವರ ಕಾರನ್ನು ವಶಕ್ಕೆ ಪಡೆದಿದ್ದರು. ಗಾಡಿಯನ್ನು ಪರಿಶೀಲನೆ ನಡೆಸಿದ್ದ ಆರ್.ಟಿ.ಒ ಅಧಿಕಾರಿಗಳು, ಕಾರಿನ ಟಯರ್, ಕಾರು ಜಖಂಗೊಂಡ ರೀತಿ, ಸ್ಪೀಡೋ ಮೀಟರ್, ಘಟನಾ ಸ್ಥಳದಲ್ಲಿ ದೊರೆತ ಅಂಶಗಳನ್ನು ಪರಿಶೀಲನೆ ನಡೆಸಿದ್ದರು. ಅಪಘಾತದ ಸಂದರ್ಭ ಇದ್ದ ಕಾರಿನ ವೇಗದ ಕುರಿತು ಸದ್ಯ ಆರ್.ಟಿ.ಒ ಅಧಿಕಾರಿಗಳು ನೀಡಿರುವ ವರದಿ ಪೊಲೀಸರ ಕೈ ಸೇರಿದೆ. ದಂಪತಿಗೆ ಡಿಕ್ಕಿಯಾದ ಬಳಿಕ ಕಾರಿನ ವೇಗ ಹೆಚ್ಚಾಗಿರುವುದಾಗಿ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರ್.ಟಿ.ಒ ಅಧಿಕಾರಿಗಳು ಪೊಲೀಸರಿಗೆ ವರದಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 30ರ ರಾತ್ರಿ 9:30ರ ಸುಮಾರಿಗೆ ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿ ಮಧ್ಯೆ ನಾಗಭೂಷಣ್ ಅವರ ಕಾರು ಅಪಘಾತಕ್ಕೊಳಗಾಗಿತ್ತು. ಸ್ನೇಹಿತರನ್ನು ಭೇಟಿಯಾಗಿ ಜೆ.ಪಿ ನಗರದ ತಮ್ಮ ಮನೆಗೆ ನಾಗಭೂಷಣ್ ತೆರಳುತ್ತಿದ್ದರು. ಫುಟ್ ಪಾತ್ ಮೇಲೆ ವಾಕಿಂಗ್ ಮಾಡ್ತಿದ್ದ ದಂಪತಿ ರಸ್ತೆಗಿಳಿದ ಪರಿಣಾಮ ತಮ್ಮ ಕಾರು ಅಪಘಾತಕ್ಕೀಡಾಗಿರುವುದಾಗಿ ಪೊಲೀಸರ ಎದುರು ನಟ ಸ್ವಯಂ ಹೇಳಿಕೆ ದಾಖಲಿಸಿದ್ದರು. ಅಪಘಾತದಲ್ಲಿ ಪ್ರೇಮ (48) ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯ ಪತಿ ಕೃಷ್ಣ (58) ಅವರು ಸದ್ಯ ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಪುತ್ರ ಪಾರ್ಥ ಎಂಬುವವರು ನೀಡಿದ ದೂರಿನನ್ವಯ ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.