ಕರ್ನಾಟಕ

karnataka

ETV Bharat / state

ಆರ್​ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ: ಮಾಜಿ ಕಾರ್ಪೊರೇಟರ್​ ಗೌರಮ್ಮ ಸೇರಿ 12 ಜನರಿಗೆ ಜೀವಾವಧಿ ಶಿಕ್ಷೆ - ಬೆಂಗಳೂರು ಕೊಲೆ ಪ್ರಕರಣ

ಆರ್​ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಅಪರಾಧಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

court
court

By

Published : Oct 29, 2020, 4:03 PM IST

Updated : Oct 29, 2020, 4:14 PM IST

ಬೆಂಗಳೂರು: ಆರ್​ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಲಯ ಇಂದು ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 59ನೇ ಸಿಸಿಎಚ್ ಕೋರ್ಟ್ ನ್ಯಾಯಾಧೀಶ ಲಕ್ಷ್ಮೀನಾರಾಯಣ ಅವರು ಎಲ್ಲ 12 ಮಂದಿ ಆರೋಪಿಗಳಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಕೃತ್ಯ ತನಿಖೆ ಹಾಗೂ ವಿಚಾರಣೆಯಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಎಲ್ಲ ಆರೋಪಿಗಳಿಗೂ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಶಂಕರ್, ರಾಘವೇಂದ್ರ, ಚಂದ್ರ, ಶಂಕರ, ಉಮಾಶಂಕರ್, ಭವಾನಿ, ವೇಲು, ಲೋಗನಾಥ, ಜಾಹೀರ್ ಹಾಗೂ ಸುರೇಶ್ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆಪರಾಧಿಗಳು.

ಪ್ರಕರಣದ ಹಿನ್ನೆಲೆ: ಆರ್​ಟಿಐ ಕಾರ್ಯಕರ್ತರಾಗಿದ್ದ ಲಿಂಗರಾಜು ಅವರು ಅಜಾದ್ ನಗರ ಪಾಲಿಕೆ ಸದಸ್ಯರಾಗಿದ್ದ ಗೌರಮ್ಮ ಮತ್ತು ಗೋವಿಂದರಾಜು ಅವರ ಅಕ್ರಮ ಸಂಪತ್ತಿನ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ, 2012ರ ನವೆಂಬರ್ 20ರಂದು ದೂರುದಾರ ಲಿಂಗರಾಜು ಅವರನ್ನು ವಿಠ್ಠಲ್ ನಗರದ ನಿವಾಸದ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್, ಘಟನೆಯ ನಿಷ್ಪಕ್ಷಪಾತ ತನಿಖೆಗೆ ಸೂಚಿಸಿತ್ತು.

ಅಲ್ಲದೇ, ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಿತ್ತು. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು, ಅಜಾದ್ ನಗರ ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು ಸೇರಿ ಲಿಂಗರಾಜು ಹತ್ಯೆಗೆ ಸುಪಾರಿ ನೀಡಿರುವುದನ್ನು ಪತ್ತೆ ಹಚ್ಚಿದ್ದರು.

Last Updated : Oct 29, 2020, 4:14 PM IST

ABOUT THE AUTHOR

...view details