ಬೆಂಗಳೂರು: ನೆರೆ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ, ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಲ್ಲಿನ ಕೋವಿಡ್ -19 ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಈ ಕೆಳಕಂಡ ವಿಶೇಷ ಸರ್ವೇಕ್ಷಣಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ಸೂಚಿಸಿದೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರು, ಕೋವಿಡ್ 19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿದ್ದರೂ / ಪಡೆಯದಿದ್ದರೂ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಬಿ - ಪಿಸಿಆರ್ ಪರೀಕ್ಷೆಯ ನಗೆಟವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.
ವಿಮಾನ, ರೈಲು, ರಸ್ತೆ ( ಬಸ್ ಹಾಗೂ ಇತರ ಸ್ವಂತ ವಾಹನಗಳ ಮುಖಾಂತರ) ಮಾರ್ಗದಲ್ಲಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ ಮೇಲಿನ ನಿಯಮದ ಪಾಲನೆಯು ಕಡ್ಡಾಯವಾಗಿರುತ್ತದೆ. ಹಾಗೂ ಕೇರಳ ಮತ್ತು ಮಹಾರಾಷ್ಟ್ರದಿಂದ ಹೊರಡುವ ಎಲ್ಲ ವಿಮಾನಗಳಿಗೂ ಅನ್ವಯವಾಗುತ್ತದೆ. ಅದರಂತೆ, 72 ಗಂಟೆಗಳ ಒಳಗೆ ಮಾಡಿಸಿದ ಆರ್ ಟಿ - ಪಿಸಿಆರ್ ನೆಗೆಟವ್ ಟೆಸ್ಟ್ ವರದಿಯನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ನೀಡಬೇಕು.
ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರ್ ಟಿ ಪಿಸಿಆರ್ ನೆಗೆಟಿವ್ ಟೆಸ್ಟ್ - ವರದಿಯನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳುವುದು ರೈಲ್ವೆ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.
ಬಸ್‌ನ ಮೂಲಕ ಪ್ರಯಾಣಿಸುವವರು ಆರ್‌ಟಿ - ಪಿಸಿಆರ್ ನೆಗೆಟವ್ ಟೆಸ್ಟ್ ವರದಿ ಹೊಂದುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯು ಆಯಾ ಬಸ್ ನಿರ್ವಾಹಕರ (bus conductor) ದ್ದಾಗಿದೆ. ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ - ವ್ಯವಹಾರ ಸೇರಿದಂತೆ, ಇತರ ಕಾರಣಗಳಿಗೆ ದೈನಂದಿನವಾಗಿ ಭೇಟಿ ನೀಡುವವರು ಪ್ರತಿ 15 ದಿನಗಳಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.