ಬೆಂಗಳೂರು: ಒಮಿಕ್ರಾನ್ ಸೋಂಕು ಅದೆಷ್ಟು ಬೇಗ ಹರಡುವಿಕೆ ಶಕ್ತಿ ಹೊಂದಿದ್ಯೋ ಅಷ್ಟೇ ವೇಗವಾಗಿ ಒಮಿಕ್ರಾನ್ ಭೀತಿಯು ಜನರಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಸದ್ಯ ಮೂವರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಗುಣಮುಖರಾಗಿದ್ದಾರೆ. ಆದರೆ, ಒಮಿಕ್ರಾನ್ ಟೆಸ್ಟ್ ರಿಪೋರ್ಟ್ ಬರುವುದೇ ತಡವಾಗುತ್ತಿದ್ದು, ಸದ್ಯ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಹೆಚ್ಚು RT-LAMP ಟೆಸ್ಟ್ ಗೆ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.
ಒಮಿಕ್ರಾನ್ ಸೋಂಕು ಪತ್ತೆಗೆ ಜಿನೋಮ್ ಸೀಕ್ವೇನ್ಸಿಂಗ್ಗೆ ಸ್ಯಾಂಪಲ್ಸ್ ಕಳುಹಿಸಬೇಕು ಹಾಗೂ ಅದರ ವರದಿ ಬರಲು 4-5 ದಿನಗಳ ಕಾಲ ಕಾಯಬೇಕು. ಆದರೆ, ಈ ಕಾಯುವಿಕೆ ನಡುವೆ ಹೆಚ್ಚು ಹೆಚ್ಚು ಸೋಂಕು ಹರಡುವ ಭೀತಿ ಇದೆ.
ಈಗಾಗಲೇ ಐಸಿಎಂಆರ್ ಕೂಡ ಆರ್ ಟಿ- ಲ್ಯಾಪ್ ವಿಧಾನಕ್ಕೆ ಅನುಮತಿ ನೀಡಿದೆ. ಇದೀಗ ರಾಜ್ಯದ ತಾಂತ್ರಿಕ ಸಲಹಾ ಸಮಿತಿ ಕೂಡ RT-LAMP ಟೆಸ್ಟ್ ಗೆ ಶಿಫಾರಸು ಮಾಡಿದೆ. ICMR ಅನುಮೋದನೆ ನೀಡಿರುವ ಟೆಸ್ಟ್ ಕಿಟ್ ಬಳಸಿ ಎಂದು ಸಲಹೆ ನೀಡಿದ್ದು, RT-LAMP ಎಂದರೆ ರಿವರ್ಸ್ ಟ್ರಾನ್ಸ್ ಸ್ಕ್ರಿಪ್ಟಸ್ ಲೂಪ್ ಮೀಡಿಯೇಟೆಡ್ ಐಸೋಥರ್ಮಲ್ ಆಂಪ್ಲಿಫಿಕೇಶನ್ ಎಂಬುದಾಗಿದೆ. ಈ ವಿಧಾನ ಬಳಕೆಯಿಂದ ಹೆಚ್ಚು ಹೆಚ್ಚಾಗಿ ಪರೀಕ್ಷೆ ಮಾಡಬಹುದು.