ಮಂಗಳೂರು:ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದಾಗಿ ದೇಶದ ರಾಷ್ಟ್ರಧ್ವಜ ತುಂಡಾಯಿತು. ಆದ್ರೆ ಮುಂದೊಂದು ದಿನ ನಮ್ಮ ಕೇಸರಿ ಧ್ವಜವೇ ಭಾರತದ ರಾಷ್ಟ್ರಧ್ವಜ ಆಗಲೇಬೇಕು ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುತ್ತಾರುವಿನಲ್ಲಿರುವ ಕೊರಗಜ್ಜನ ಆದಿ ಸ್ಥಳದಲ್ಲಿ ನಡೆದ 'ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ' ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೂರು ಬಣ್ಣಗಳ ದೇಶದ ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಿದವರು ಯಾರು. ಅದಕ್ಕಿಂತಲೂ ಮೊದಲು ನಮ್ಮಲ್ಲಿ ಯಾವ ಧ್ವಜವಿತ್ತು. ಮುಂದೊಂದು ದಿನ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಮೂರನೆಯವರು ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ರಾಷ್ಟ್ರಧ್ವಜ ಬದಲು ಮಾಡಬಾರದಂತೇನು ಇಲ್ಲ. ಇದೇ ರೀತಿ ಮುಂದುವರಿದಲ್ಲಿ ಹಿಂದೂ ಸಮಾಜ ಒಟ್ಟಾಗುತ್ತದೆ ಎಂದು ಹೇಳಿದರು.
ಇಂದು 'ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ನೀವು ನೋಡೋದು ಒಂದು ಸಣ್ಣ ಭಾಗವಷ್ಟೇ. ನಮ್ಮ ದೇಶದಲ್ಲಿ ಧರ್ಮವು ಹತ್ಯೆಯಾದ ಸಂದರ್ಭ ಕಾಂಗ್ರೆಸ್ ಪಕ್ಷ ಅದನ್ನು ಒಪ್ಪಿಕೊಂಡಿತ್ತು. ಇಂದು ಕಿತಾಬ್ ಬದಲಿಗೆ ಹಿಜಾಬ್ ಬಂದಿದೆ. ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ನೀಡಿದರೂ ಪ್ರತ್ಯೇಕತಾವಾದಿ ಮನೋಭಾವವನ್ನು ಇನ್ನೂ ಹೊಂದಿದ್ದಾರೆ. ಇದು ದೇಶವನ್ನು ತುಂಡು ಮಾಡುವ ಪ್ರಯತ್ನ ಎಂದು ವಾಗ್ದಾಳಿ ನಡೆಸಿದರು.