ಕರ್ನಾಟಕ

karnataka

ETV Bharat / state

'ಚಡ್ಡಿ' ಸುಟ್ಟ ಮೇಲೆ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ವಾಕ್ಸಮರದ ಕಾವು..

'ಚಡ್ಡಿ' ಸುಟ್ಟ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೆ ಕಾರಣವಾಗಿದೆ..

rss chaddi burnt news sounds in Karnataka
ಆರೋಪ-ಪ್ರತ್ಯಾರೋಪಗಳ ಸುರಿಮಳೆಗೆ ಕಾರಣವಾಯ್ತು 'ಚಡ್ಡಿ' ಸುಟ್ಟ ವಿಚಾರ

By

Published : Jun 4, 2022, 8:03 PM IST

ಬೆಂಗಳೂರು :'ಚಡ್ಡಿ' ಸುಟ್ಟ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೆ ಕಾರಣವಾಗಿದೆ.

ಪಠ್ಯ ಪರಿಷ್ಕರಣೆ ವಿಚಾರವಾಗಿ ಎನ್ಎಸ್​ಯುಐ ಕಾರ್ಯಕರ್ತರು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ತಿಪಟೂರು ನಿವಾಸ ಬಳಿ ಪ್ರತಿಭಟನೆ ನಡೆಸಿದ್ದರು. ಬಿ.ಸಿ ನಾಗೇಶ್ ಹೊರ ಬರುವಂತೆ ಒತ್ತಾಯಿಸಿ ಹೋರಾಟ ನಡೆಸಿದ ಸಂದರ್ಭ ಆರ್​ಎಸ್​ಎಸ್ ಚಡ್ಡಿ ಸುಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವೀಗ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಆರ್‌ಎಸ್‌ಎಸ್‌ ಚಡ್ಡಿ ಸುಟ್ಟು ಪ್ರತಿಭಟನೆ ನಡೆಸಿದ್ದ ಎನ್‌ಎಸ್‌ಯುಐ ಕಾರ್ಯಕರ್ತರು..

ಎನ್​ಎಸ್​ಯುಐ ಕಾರ್ಯಕರ್ತರು ಚಡ್ಡಿ ಸುಟ್ಟಿರುವುದನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದರೆ, ಕಾಂಗ್ರೆಸ್ ನಾಯಕರು ಇದನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಶಿಕ್ಷಣ ನೀತಿ ಸರಿಯಿಲ್ಲ. ಬಲವಂತವಾಗಿ ಕೇಸರೀಕರಣವನ್ನು ತುರುಕುವ ಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಪಠ್ಯಕ್ರಮ ರಚನಾ ಸಮಿತಿಯನ್ನು ವಜಾಗೊಳಿಸುವಂತೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹೋರಾಟ ನಡೆಸಿದ್ದವು. ಆದರೆ, ವಜಾಗೊಳಿಸುವ ಬದಲು ಸರ್ಕಾರ ಸಮಿತಿಯನ್ನು ವಿಸರ್ಜಿಸುವ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಂಡಿದೆ.

'ಚಡ್ಡಿ ಸುಡುವ ಅಭಿಯಾನ' :ಸಚಿವ ನಾಗೇಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಪ್ರಕರಣವನ್ನು ಸಿಎಂ ಬೊಮ್ಮಾಯಿ ಖಂಡಿಸಿದ್ದರು. ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ನಿನ್ನೆ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾವು ಸರ್ಕಾರ ನಡೆಸಿದ್ದೇವೆ. ನಾವು ಎಂದಿಗೂ ಪ್ರತಿಭಟನೆಯನ್ನು ಹತ್ತಿಕ್ಕಿಲ್ಲ. ಆದರೆ, ಈ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಜನರು ಶಾಪ ಹಾಕುತ್ತಿದ್ದಾರೆ. ಅಲ್ಲಿ ಒಂದೇ ಒಂದು ಚಡ್ಡಿ ಸುಟ್ಟಿರೋದು. ಪ್ರತಿಭಟನೆ ಮಾಡಿದವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ 'ಚಡ್ಡಿ ಸುಡುವ ಅಭಿಯಾನ' ಶುರು ಮಾಡುತ್ತೇವೆಂದು ಗುಡುಗಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ :ಸಿದ್ದರಾಮಯ್ಯ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಚಡ್ಡಿಯ (ಆರ್‌ಎಸ್‌ಎಸ್) ಸಹವಾಸಕ್ಕೆ ಬಂದರೆ ಕಾಂಗ್ರೆಸ್ ಸುಟ್ಟು ಹೋಗುವುದು ಗ್ಯಾರಂಟಿ. ಚಡ್ಡಿಗೆ ಬೆಂಕಿ ಹಚ್ಚಿ ನೋಡಿ ಹನುಮಂತ ಲಂಕೆ ಸುಟ್ಟ ಹಾಗೆ ನಿಮ್ಮ ಪಕ್ಷದ ಬುಡವೇ ಸುಟ್ಟು ಬೂದಿಯಾಗಲಿದೆ ಎಂದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿ ಎನ್ಎಸ್​ಯುಐ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸುನಿಲ್‌ಕುಮಾರ್, ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ನಡೆಸಲಾಗುವುದು ಎಂದು ಕಾಂಗ್ರೆಸ್ಸಿಗರು ಕರೆ ನೀಡಿದ್ದಾರೆ. ದೇಶಾದ್ಯಂತ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್​ಗೆ ಈಗ ಮಾಡಲು ಯಾವುದೇ ಕೆಲಸವಿಲ್ಲದಂತಾಗಿದೆ. ಚಡ್ಡಿ ಸುಟ್ಟು ಬೆತ್ತಲಾಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನೂ ಚಡ್ಡಿ ಇರುವುದರಿಂದ ಈ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಚಡ್ಡಿ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ಜಾಗತಿಕ ಲಿಂಗಾಯತ ಮಹಾಸಭಾದಿಂದ ಸರ್ಕಾರದ ವಿರುದ್ಧ ಕಿಡಿ

ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ ಅಲ್ವಾ? ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿಗಳನ್ನು ಸುಡ್ತೀವಿ. ಎಷ್ಟು ಜನರನ್ನು ಅರೆಸ್ಟ್ ಮಾಡ್ತೀರಾ ನೋಡೋಣ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಒಟ್ಟಾರೆ ರಾಜ್ಯಾದ್ಯಂತ ಚಡ್ಡಿ ಸುಟ್ಟ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ವಾಕ್ಸಮರಕ್ಕೆ ಅವಕಾಶ ಮಾಡಿಕೊಟ್ಟಿದೆ.

ABOUT THE AUTHOR

...view details