ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಧಾನ ಪರಿಷತ್ತಿನಲ್ಲಿ ಗಂಭೀರ ಆರೋಪ ಮಾಡಿದರು.
2021-22ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆಯ ಮೇಲೆ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಗೊಂದಲವಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು, ಆದರೆ ಈಗ ಉಳ್ಳವರಿಗೆ ಮೀಸಲಾತಿ ಕೊಡುವ ಪ್ರಯತ್ನ ನಡೆಯುತ್ತಿದೆ. ಸರಿ ಸಮಾನವಾಗಿ ಮೀಸಲಾತಿ ಬೇಕು. ಮಲ್ಲಿಕಾರ್ಜುನ ಖರ್ಗೆ ಮಗ ದೇವಸ್ಥಾನದ ಒಳಗೆ ಹೋಗಲಾಗುತ್ತದೆಯಾ? ಸಿದ್ದರಾಮಯ್ಯ, ಈಶ್ವರಪ್ಪ ಅವರಿಗೆ ದೇವಸ್ಥಾನದ ಒಳಗೆ ಪ್ರವೇಶವಿದೆಯಾ ಎಂದರು.
ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಹರಿಪ್ರಸಾದ್ ಆರೋಪಕ್ಕೆ ಬಿಜೆಪಿ ಸದಸ್ಯ ರವಿಕುಮಾರ್ ಆಕ್ಷೇಪಿಸಿದರು. ಯಾವ ದೇವಸ್ಥಾನದಲ್ಲಿ ಅವಕಾಶ ಇಲ್ಲ ಹೇಳಿ ಎಂದು ಪಟ್ಟು ಹಿಡಿದರು. ಇದಕ್ಕೆ ನನ್ನ ಜೊತೆ ಬನ್ನಿ ತೋರಿಸುತ್ತೇನೆ ಎಂದು ಮಾತು ಮುಂದುವರೆಸಿದ ಹರಿಪ್ರಸಾದ್, ಆರ್‌ಎಸ್‌ಎಸ್ ಸರಸಂಚಾಲಕರು ಮೀಸಲಾತಿ ತೆಗೆಯಬೇಕು ಎನ್ನುವ ಹೇಳಿಕೆ ನೀಡಿದ್ದಾರೆ ಎಂದರು. ಇದಕ್ಕೆ ಮತ್ತೆ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ದಾಖಲೆ ಕೊಡಿ, ಅಂಥ ಹೇಳಿಕೆ ನೀಡಿಲ್ಲ ಎಂದರು. ದಾಖಲೆ ಕೊಟ್ಟರೆ ರಾಜೀನಾಮೆ ಕೊಡುತ್ತೀರಾ ಎಂದು ರವಿಕುಮಾರಗೆ ಹರಿಪ್ರಸಾದ್ ಸವಾಲೆಸೆದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ನನ್ನ ಆಶಯಗಳನ್ನು ಆರ್‌ಎಸ್‌ಎಸ್ ಈಡೇರಿಸುತ್ತಿದೆ ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದರು. ಇದಕ್ಕೆ ಕಿಡಿಕಾರಿದ ಕಾಂಗ್ರೆಸ್, ಅಂಬೇಡ್ಕರ್ ಆ ರೀತಿ ಹೇಳಿಲ್ಲ, ಅದನ್ನು ನೀವು ಹುಟ್ಟುಹಾಕಿದ್ದೀರಾ, ಅದು ನಾಗ್ಪುರ ವಿವಿ ಬುಕ್ನಲ್ಲಿದೆ ಅಷ್ಟೇ ಎಂದು ಬಿಜೆಪಿ ಸದಸ್ಯರ ವಿರುದ್ಧ ಮುಗಿಬಿದ್ದರು.
ಮೀಸಲಾತಿ ತೆಗೆಯಲು ಸಾಧ್ಯವಿಲ್ಲ ಎನ್ನುವುದು ಆರ್ಎಸ್ಎಸ್ಗೆ ಮನದಟ್ಟಾಗಿದೆ. ಚುನಾವಣೆಯಲ್ಲಿ ಹಿನ್ನಡೆಯಾಗುವುದು ಗೊತ್ತಾಗಿದೆ. ಹೀಗಾಗಿ ಮೇಲ್ವರ್ಗದವರಿಂದ ಮೀಸಲಾತಿ ಕೂಗು ಎಬ್ಬಿಸಿದೆ. ಈಗ ನಡೆಯುತ್ತಿರುವ ಮೀಸಲಾತಿ ಹೋರಾಟ ಆರ್‌ಎಸ್‌ಎಸ್ ನ ಷಡ್ಯಂತ್ರವಾಗಿದೆ ಎಂದರು.