ಬೆಂಗಳೂರು : ಆರ್ಎಸ್ಎಸ್ ನಿಷೇಧ ಕುರಿತು ನಿನ್ನೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿದ ಬೆನ್ನಲ್ಲೇ ಅದಕ್ಕೆ ಇಂದು ಸಚಿವ ಜಿ ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದು, ವೈಯಕ್ತಿಕ ಅಭಿಪ್ರಾಯಗಳು ಪಕ್ಷದ ಅಥವಾ ಸರ್ಕಾರದ್ದಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆರ್ಎಸ್ಎಸ್ ನಿಷೇಧ ಸಂಬಂಧ ಹೇಳಿಕೆಗಳನ್ನು ನೀಡುವುದರಿಂದ ರಾಜ್ಯದಲ್ಲಿ ಜನರ ಭಾವನೆ ಕೆರಳಿಸಿದಂತೆ ಆಗಲಿದೆ. ಇದರಿಂದ ಸರ್ಕಾರ ರಚನೆಯಾದ ಆರಂಭದಲ್ಲೇ ವ್ಯತಿರಿಕ್ತ ಪರಿಣಾಮಗಳು ಉಂಟಾಗದಿರಲಿ ಎಂಬ ಉದ್ದೇಶದಿಂದ ಹಿರಿಯ ಸಚಿವರಾದ ಪರಮೇಶ್ವರ್ ಇದಕ್ಕೊಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದಾರೆ.
ಕೆಲವರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯವನ್ನು ಹೇಳಿರಬಹುದು: ನಾವು ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್ಐಗೆ ಸಂಬಂಧಿಸಿದಂತೆ ಹೇಳಿದ್ದೆವು. ಒಂದು ವೇಳೆ, ಅವರು ಶಾಂತಿಗೆ ಭಂಗ ತಂದರೆ, ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ, ಅಗತ್ಯವಿದ್ದರೆ ಅವರನ್ನು ನಿಷೇಧಿಸುವ ಮಟ್ಟಕ್ಕೂ ಹೋಗುತ್ತೇವೆ ಎಂದು ಹೇಳಿದ್ದೆವು. ಅದನ್ನು ಬಿಟ್ಟರೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಕೆಲವರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯವನ್ನು ಹೇಳಿರಬಹುದು ಎಂದು ವಿವರಿಸಿದ್ದಾರೆ.
ಸಮಾಜಕ್ಕೆ ವಿರುದ್ಧವಾದ, ಸಮಾಜದಲ್ಲಿ ಶಾಂತಿ ಕದಡುವ ಎಲ್ಲವೂ ಜನವಿರೋಧಿ, ಅದು ಶಾಸನಗಳು ಅಥವಾ ನಿಯಮಗಳನ್ನು ಪರಿಶೀಲಿಸಲಾಗುವುದು. ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿಲ್ಲ. ಖಾತೆ ಹಂಚಿಕೆ ಆದ ಮೇಲೆ, ಯಾರು ಸಚಿವರಾಗುತ್ತಾರೋ ಅವರು ನಿಷೇಧ ವಿಷಯಗಳ ಬಗ್ಗೆ ಅಭ್ಯಾಸ ಮಾಡುತ್ತಾರೆ. ನಂತರ ಸಂಪುಟದಲ್ಲಿ ತೀರ್ಮಾನ ಆಗಬೇಕು. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ವಿವರಿಸಿದ್ದಾರೆ.
ಏನಂದಿದ್ದರು ಪ್ರಿಯಾಂಕ ಖರ್ಗೆ :ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್ಎಸ್ಎಸ್ನಂತಹ ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು.