ಬೆಂಗಳೂರು:ಲಾಕ್ಡೌನ್ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವೃತ್ತಿನಿರತ ವಕೀಲರಿಗೆ 50 ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ನೆರವು ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ(ಎಎಬಿ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಬೆಂಗಳೂರು ವಕೀಲರ ಸಂಘ, ಲಾಕ್ಡೌನ್ ನಂತರ 8 ತಿಂಗಳಿಂದ ಕೋರ್ಟ್ ಕಲಾಪಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಇದರಿಂದಾಗಿ ದೈನಂದಿನ ಸಂಪಾದನೆಯನ್ನೇ ನಂಬಿಕೊಂಡಿದ್ದ ರಾಜ್ಯದ 1 ಲಕ್ಷಕ್ಕೂ ಅಧಿಕ ವಕೀಲರಿಗೆ ಆದಾಯವಿಲ್ಲದಂತಾಗಿದೆ. ಇವರಲ್ಲಿ ಅತಿ ಹೆಚ್ಚು ಯುವ ವಕೀಲರು ಗ್ರಾಮೀಣ ಭಾಗದಿಂದ ಬಂದವರೇ ಆಗಿದ್ದು, ಅವರಿಗೆ ಕೆಲಸ ಮತ್ತು ಸಂಪಾದನೆ ಇಲ್ಲದಂತಾಗಿದೆ.
ಪ್ರಸ್ತುತ ವಕೀಲರ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಜೀವನ ನಿರ್ವಹಣೆ, ಮನೆ ಬಾಡಿಗೆ, ಕಚೇರಿ ಬಾಡಿಗೆ ನೀಡಲಿಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಶ್ರಮಿಕ ವರ್ಗಕ್ಕೆ ಈಗಾಗಲೇ ಹಲವು ವಿಶೇಷ ಪ್ಯಾಕೇಜ್ಗಳ ಮೂಲಕ ನೆರವು ನೀಡಿದೆ. ಆದರೆ ವೃತ್ತಿನಿರತ ವಕೀಲರಿಗೆ ಬರೀ 5 ಕೋಟಿ ರೂಪಾಯಿ ನೆರವನ್ನಷ್ಟೇ ನೀಡಿದೆ. ಈ ಹಣ ಲಕ್ಷಕ್ಕೂ ಅಧಿಕವಿರುವ ವಕೀಲ ಸಮುದಾಯಕ್ಕೆ ಯಾವುದಕ್ಕೂ ಸಾಲುವುದಿಲ್ಲ. ನೆರೆಯ ತೆಲಂಗಾಣ ರಾಜ್ಯ ಸರ್ಕಾರ ವಕೀಲರಿಗೆ 25 ಕೋಟಿ ರೂಪಾಯಿ ನೆರವು ನೀಡಿದೆ. ರಾಜ್ಯದ ಎಲ್ಲಾ ವಕೀಲರಿಗೆ ಆರೋಗ್ಯ ವಿಮೆ ನೀಡುವಂತೆ ಆರೋಗ್ಯ ಸಚಿವರಿಗೆ ಸಲ್ಲಿಸಿರುವ ಮನವಿ ಸಂಬಂಧ ಯಾವುದೇ ಪ್ರಗತಿ ಕಂಡುಬಂದಿಲ್ಲ. ಸರ್ಕಾರ ಮರಾಠ ನಿಗಮ ಹಾಗೂ ವೀರಶೈವ ಲಿಂಗಾಯ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲು 50 ಕೋಟಿ ನೀಡಿದೆ. ಬೆಂಗಳೂರು ವಕೀಲರ ಸಂಘ ಆರ್ಥಿಕ ನೆರವು ಕೋರಿ ಸರ್ಕಾರಕ್ಕೆ ಈಗಾಗಲೇ ಮೂರು ಬಾರಿ ಮನವಿಗಳನ್ನು ಸಲ್ಲಿಸಿದ್ದರೂ ಗಣನೆಗೆ ತೆಗೆದುಕೊಂಡಿಲ್ಲ.
ಆದ್ದರಿಂದ ರಾಜ್ಯ ಸರ್ಕಾರ ವಕೀಲರ ಪರಿಸ್ಥಿತಿಯನ್ನು ಪರಿಗಣಿಸಿ ಕೂಡಲೇ 50 ಕೋಟಿ ರೂಪಾಯಿಗಳ ನೆರವು ಘೋಷಿಸಲು ಹಾಗೂ ವಕೀಲರಿಗೆ ಉಚಿತ ವಿಮೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಚಾಂಜಿ ಶಿವಮೂರ್ತಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.