ಬೆಂಗಳೂರು:ಮಳೆಯಿಂದ ಹಾನಿಗೊಳಗಾದ ಸ್ವತ್ತುಗಳ ಪುನಃ ಸ್ಥಾಪನೆ, ರಸ್ತೆ, ಶಾಲೆ ದುರಸ್ತಿ ಕಾಮಗಾರಿಗಳಿಗಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತುರ್ತಾಗಿ ದುರಸ್ತಿ ಕಾಮಗಾರಿಗಳಿಗಾಗಿ ಬೆಳಗಾವಿಗೆ 200 ಕೋಟಿ ರೂ., ಬಾಗಲಕೋಟೆಗೆ 50 ಕೋಟಿ ರೂ., ಚಿಕ್ಕಮಗಳೂರು 20 ಕೋಟಿ, ಶಿವಮೊಗ್ಗ 10 ಕೋಟಿ, ಉ.ಕನ್ನಡ 25, ದ.ಕ 35 ಕೋಟಿ, ಧಾರವಾಡ 40 ಕೋಟಿ, ಗದಗ 10 ಕೋಟಿ, ಹಾವೇರಿ 35 ಕೋಟಿ, ಹಾಸನ 15 ಕೋಟಿ, ಕೊಡಗು 10 ಕೋಟಿ, ಮೈಸೂರು 30 ಕೋಟಿ ಹಾಗೂ ಉಡುಪಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಒಂದು ನಯಾ ಪೈಸೆ ಕೂಡ ಬಿಡುಗಡೆ ಮಾಡಿಲ್ಲ ಅಂತಾರೆ. ಹೌದು ನಾವು ಪೈಸೆ ಹಣ ಬಿಡುಗಡೆ ಮಾಡಿಲ್ಲ. ನಾವು ರೂಪಾಯಿಯಲ್ಲಿ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಮೂಡಿಗೆರೆಯಲ್ಲಿ ಭೂ ಕುಸಿತದಿಂದ ತೋಟ, ಮನೆ ನಾಶವಾಗಿದೆ. ಹೀಗಾಗಿ ಅವರಿಗೆ ತೋಟ, ಮನೆ ಎರಡನ್ನೂ ಕೊಡುತ್ತೇವೆ. ಇದಕ್ಕಾಗಿನೇ ಈಗಾಗಲೇ ಅಲ್ಲಿ 354 ಎಕರೆ ಗುರುತು ಮಾಡಿದ್ದೇವೆ. ಭೂಕುಸಿತವಾಗಿರುವುದನ್ನು ಸರ್ಕಾರಿ ಜಮೀನಾಗಿ ಮಾರ್ಪಾಡು ಮಾಡುತ್ತೇವೆ. ಕೊಡಗಿನಲ್ಲೂ ಇದೇ ಮಾದರಿಯಲ್ಲಿ ಜಮೀನು ಕೊಡಲಿದ್ದೇವೆ ಎಂದು ತಿಳಿಸಿದರು.
ಒಂದು ವಾರದಲ್ಲಿ ಕೇಂದ್ರದಿಂದ ಪರಿಹಾರ ಹಣ ಬಿಡುಗಡೆಯಾಗಲಿದೆ. ಅದು ಬಂದ ತಕ್ಷಣ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಂದಾಯ ಜಮೀನಿನಲ್ಲಿ ಪೌತಿ ಖಾತೆ ಆಂದೋಲನ ಮಾಡಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ತಮ್ಮ ಮೃತ ತಾತ, ತಂದೆಯ ಭೂಮಿಯನ್ನು ಅವರ ಮಕ್ಕಳ ಹೆಸರಿಗೆ ಮಾಡಿಕೊಡುವ ಪೌತಿ ಖಾತೆ ಸಾಕಷ್ಟು ಬಾಕಿ ಉಳಿದುಕೊಂಡಿದೆ. ಇದಕ್ಕಾಗಿ ಪೌತಿ ಖಾತೆ ಆಂದೋಲನ ಮಾಡಲು ಡಿಸಿಗಳಿಗೆ ಸೂಚನೆ ನೀಡಿದ್ದು, ಇವತ್ತಿನಿಂದ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಂತ್ಯ ಸಂಸ್ಕಾರ ಯೋಜನೆಯಡಿ ಬಡವರಿಗೆ ಐದು ಸಾವಿರ ರೂ. ನೀಡಲಾಗುತ್ತಿದೆ. ಆ ಮೊತ್ತವನ್ನು ಸತ್ತ 24 ತಾಸುಗಳಲ್ಲಿ ಕೊಡಬೇಕು. ಆದರೆ ಅದನ್ನು ಮೂರು ವರ್ಷವಾದರೂ ಕೊಟ್ಟಿಲ್ಲ. ಆ ರೀತಿ ಒಟ್ಟು 84,394 ಪ್ರಕರಣ ಬಾಕಿ ಇದ್ದು, 72.74 ಕೋಟಿ ರೂ. ಹಣ ಬಾಕಿ ಇದೆ. ಈ ಸಂಬಂಧ ಸದ್ಯ 18 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ 18 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿ ಯೋಜನೆಯಡಿ ಪ್ರತಿ ವರ್ಷ 65 ಲಕ್ಷ ಫಲಾನುಭವಿಗಳಿಗೆ 7,200 ಕೋಟಿ ರೂ. ಪಿಂಚಣಿ ಕೊಡಲಾಗುತ್ತಿದೆ. ಇದರಲ್ಲಿ ಸಾಕಷ್ಟು ಬೋಗಸ್ ಫಲಾನುಭವಿಗಳಿದ್ದಾರೆ. ಈ ಹಿನ್ನೆಲೆ ದೂರು ಬಂದ ಹಿನ್ನೆಲೆ ಪಿಂಚಣಿ ಸೇವೆಯನ್ನು ಆಧಾರ್ ಗೆ ಲಿಂಕ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.