ಕರ್ನಾಟಕ

karnataka

ETV Bharat / state

ವಿನಾಕಾರಣ ಅರ್ಜಿ ಸಲ್ಲಿಸಿದವರಿಗೆ 5 ಲಕ್ಷ ರೂ ದಂಡ : ಹೈಕೋರ್ಟ್​

ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಕುರಿತಂತೆ ವಿನಾ ಕಾರಣ ಅರ್ಜಿ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ವ್ಯಕ್ತಿಗೆ ಹೈಕೋರ್ಟ್ 5 ಲಕ್ಷ ರೂಗಳ ದಂಡ ವಿಧಿಸಿ ಆದೇಶಿಸಿದೆ.

rs-5-lakh-fine-for-appeal-without-reason-says-highcourt
ವಿನಾಕಾರಣ ಅರ್ಜಿ ಸಲ್ಲಿಸಿದವರಿಗೆ 5 ಲಕ್ಷ ರೂ ದಂಡ : ಹೈಕೋರ್ಟ್​

By

Published : Sep 21, 2022, 10:49 PM IST

ಬೆಂಗಳೂರು: ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಕುರಿತಂತೆ ವಿನಾ ಕಾರಣ ಅರ್ಜಿ ಸಲ್ಲಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ವ್ಯಕ್ತಿಗೆ ಹೈಕೋರ್ಟ್ 5 ಲಕ್ಷ ರೂಗಳ ದಂಡ ವಿಧಿಸಿ ಆದೇಶಿಸಿದೆ.

ಅರ್ಜಿಯನ್ನು ವಜಾಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾ. ಬಿ.ವೀರಪ್ಪ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ. ಸುಳ್ಯ ತಾಲೂಕಿನ ಮೋಹನ್ ಅವರ ಕಾರ್ಯಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ದಂಡ ವಿಧಿಸಿ ಆದೇಶಿಸಿದೆ. ಅಲ್ಲದೇ, ದಂಡದ ಮೊತ್ತವನ್ನು ಎರಡು ತಿಂಗಳಲ್ಲಿ ಬೆಂಗಳೂರು ವಕೀಲರ ಸಂಘಕ್ಕೆ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ.

ಅರ್ಜಿದಾರರು ಮೂಲತಃ ವಕೀಲರಾಗಿದ್ದರೂ ಸ್ವತಃ ವಾದಿಸಿದ್ದಾರೆ. ಈ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಆ ಮೂಲಕ ನ್ಯಾಯಾಂಗದ ಸಮಯ ವ್ಯರ್ಥ ಮಾಡಿದ್ದಾರೆ. ನ್ಯಾಯಾಲಯಗಳು ದೇವಾಲಯಗಳಿದ್ದಂತೆ ಜನರಿಗೆ ಇಂದಿಗೂ ನಂಬಿಕೆ ಉಳಿದಿರುವುದು ನ್ಯಾಯಾಲಯಗಳಲ್ಲಿ ಮಾತ್ರ. ಅಂತಹ ನ್ಯಾಯಾಂಗದಲ್ಲಿ ಗೊಂದಲ ಮೂಡಿಸುವುದಕ್ಕೆ ಬಿಡುವುದಿಲ್ಲ. ಹಾಗೆ ಬಿಟ್ಟರೆ ನ್ಯಾಯದಾನ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಕಳೆದು ಹೋಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜತೆಗೆ, ಈ ರೀತಿಯ ಪ್ರಕರಣಗಳನ್ನು ನೋಡಿಕೊಂಡು ಸುಮ್ಮನೆ ಕೂರಲಾಗದು. ನ್ಯಾಯಾಂಗ ವರ್ಚಸ್ಸಿಗೆ ಧಕ್ಕೆ ತರಲು ಯಾರಿಗೂ ಬಿಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳು ಹೆಚ್ಚುತ್ತಿವೆ. ಇಂತಹ ಪ್ರವೃತ್ತಿ ಹತ್ತಿಕ್ಕಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ : 2018ರ ಆ 7ರಂದು ಸರ್ಕಾರದ ಮಾಹಿತಿ ಹಕ್ಕು ಆಯೋಗದ ಒಬ್ಬ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. 419 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಸಮಿತಿ ಮೂವರ ಹೆಸರನ್ನು ಶಿಫಾರಸು ಮಾಡಿತ್ತು.

ಅದರಂತೆ ಸಿಎಂ, ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ಆ ಮೂರು ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ರಾಜ್ಯಪಾಲರು, ಮಾಜಿ ಕಾನೂನು ಕಾರ್ಯದರ್ಶಿ ಎನ್.ಸಿ. ಶ್ರೀನಿವಾಸ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಸದಸ್ಯರನ್ನಾಗಿ ನಿವೃತ್ತ ಐಎಫ್ಎಸ್ ಅಧಿಕಾರಿ ಎಸ್.ಎಂ.ಸೋಮಶೇಖರ್ ಹಾಗೂ ಶಿವಮೊಗ್ಗದ ವಕೀಲ ಕೆ.ಪಿ.ಮಂಜುನಾಥ್ ಅವರನ್ನು ನೇಮಕ ಮಾಡಿ 2019ರ ಫೆ.22ರಂದು ಆದೇಶ ಹೊರಡಿಸಿದ್ದರು.

ಈ ನೇಮಕವನ್ನು ಪ್ರಶ್ನಿಸಿದ್ದ ಅರ್ಜಿದಾರರು, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಅಲ್ಲದೆ, ಸುಪ್ರೀಂಕೋರ್ಟ್ ಅಂಜಲಿ ಭಾರದ್ವಾಜ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ.

ನೇಮಕ ಏಕ ಪಕ್ಷೀಯವಾಗಿದ್ದು, ನೇಮಕಗೊಂಡಿರುವವರ ಹಿನ್ನೆಲೆ ಪರಿಶೀಲನೆ ನಡೆಸಿಲ್ಲ. ನೇಮಕಾತಿ ಸಂವಿಧಾನದ ಕಲಂ 21 ಮತ್ತು 141ಕ್ಕೆ ವಿರುದ್ಧವಾಗಿದೆ. ಜತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿ ತರಾತುರಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ದ್ವಿಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಬಾಗ್ಮನೆ ಟೆಕ್​ ಪಾರ್ಕ್​ ಒತ್ತುವರಿ: ಲೋಕಾಯುಕ್ತ ಮಧ್ಯಪ್ರವೇಶ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಪಿಐಎಲ್

For All Latest Updates

TAGGED:

ABOUT THE AUTHOR

...view details