ಬೆಂಗಳೂರು: ಪವರ್ ಬ್ಯಾಂಕ್ ಎನ್ನುವ ಹೂಡಿಕೆ ಸೇರಿದಂತೆ ವಿವಿಧ ಆನ್‌ಲೈನ್ ಪೋರ್ಟಲ್ಗಳ ಮೂಲಕ ಲಾಭದ ಆಮಿಷವೊಡ್ಡಿ ಸುಮಾರು 290 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿರುವ ಕಂಪನಿಗಳ ಇಬ್ಬರು ಚೀನಿ ಮತ್ತು ಟಿಬೆಟನ್ ಪ್ರಜೆಗಳು ಹಾಗೂ ಐವರು ನಿರ್ದೇಶಕರು ಸೇರಿದಂತೆ ಒಟ್ಟು 11 ಜನ ಆರೋಪಿಗಳನ್ನು ಸಿಐಡಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಸಿಐಡಿ ಎಸ್.ಪಿ. ಶರತ್ ನೇತೃತ್ವದ ತಂಡ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನ ಹಾಗೂ ವಾರ ಲಾಭದ ಆಮಿಷವೊಡ್ಡಿ ರಾಜ್ಯದ ಸಾವಿರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪದಡಿ 13 ಕಂಪನಿಗಳ ವಿರುದ್ಧ ರೇಜೋರ್‌ಪೇ ಕಂಪನಿಯ ಕಾನೂನು ವಿಭಾಗದ ಪ್ರತಿನಿಧಿ ಅಭಿಷೇಕ್ ಅಭಿನವ್ ಆನಂದ್ ಎನ್ನುವವರು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ಈ ಮೊದಲು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಡಬ್ಲ್ಯುಪಿ ರಮ್ಮಿ ಕಂಪನಿ ನಿರ್ದೇಶಕ ಅನಸ್ ಅಹ್ಮದ್, ಇಬ್ರಾಹಿಂ ಅಮೀರ್, ಧೋನ್‌ಡುಪ್ ವಂಗ್ಯಾಲ್, ಅರೋಕಿಯಾನಾಥನ್, ರಾಮ್ ಉಜಘರ್, ಪ್ರಕಾಶ್ ವೈರಾಗಿ, ಹರೇಶ್‌ಬಾಯ್ ಗೋಬರಪಬಾಯ್, ವನಜಾರ್ ವಿಜಯ್ ಬಾಯ್, ವನಜಾರ್ ಮಮತಾ ಬೆನ್, ಪರ್ಪಿಲೆಹ್ಯುಸ್ ಸನ್ನಿ, ಜ್ಯೋತಿ ತಿವಾರಿ, ಭಗವತಿ ಪಂತ್ ಎನ್ನುವವರ ವಿರುದ್ಧ ವಂಚನೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಕೇರಳ ಮೂಲದ ಆರೋಪಿ ಅನಸ್ ಅಹ್ಮದ್ ಚೀನಾದಲ್ಲಿ ವ್ಯಾಸಂಗ ಮಾಡಿದ್ದು, ಹವಾಲಾ ಮತ್ತು ಅಕ್ರಮ ಹಣ ವರ್ಗಾವಣೆ ದಂಧೆಯ ಪ್ರಮುಖ ರೂವಾರಿಯಾಗಿದ್ದ. ಚೈನ್ ಹವಾಲಾ ಏಜೆಂಟರೊಂದಿಗೆ ಸಂಬಂಧ ಹೊಂದಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪತ್ನಿಯೂ ಆಗಿರುವ ಚೀನಾ ಪ್ರಜೆ ಹು ಕ್ಸಿಯೋಲಿನ್ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕಿದೆ. ತನಿಖಾ ಸಮಯದಲ್ಲಿ ಈ ಪ್ರಕರಣದಲ್ಲಿ ಒಟ್ಟಾರೆಯಾಗಿ ಆರೋಪಿತ ಕಂಪನಿಗಳು ಬ್ಯಾಂಕ್ ಖಾತೆಗಳಿಗೆ 290 ಕೋಟಿ ರೂ.ಗೂ ಅಧಿಕ ಮೊತ್ತದ ಒಳಹರಿವು ಕಂಡು ಬಂದಿದ್ದು, ಸೈಬರ್ ಪೊಲೀಸರು ಬ್ಯಾಂಕ್ ಖಾತೆಗಳನ್ನು ಗುರುತಿಸಿ ಗಣನೀಯ ಮೊತ್ತವನ್ನು ಖಾತೆಗಳಲ್ಲೆ ಬ್ಲಾಕ್ ಮಾಡಿದ್ದಾರೆ.
ಅಭಿಷೇಕ್ ಅಭಿನವ್ ಆನಂದ್ ದೂರಿನ ವಿವರ:
ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಹಣ ವರ್ಗಾವಣೆ ಕಂಪನಿಯಾಗಿ ರೇಜೋರ್ ಪೇ ಕೆಲಸ ಮಾಡುತ್ತಿದೆ. ವಂಚನೆ ಪ್ರಕರಣದಡಿ 13 ಆರೋಪಿಗಳ ಕಂಪನಿಗಳು ನಮ್ಮ ಕಂಪನಿಯಡಿ ನೋಂದಣಿ ಮಾಡಿಕೊಂಡಿದ್ದವು. ಪವರ್ ಬ್ಯಾಂಕ್ ಹಾಗೂ ಆನ್‌ಲೈನ್ ಆ್ಯಪ್‌ಗಳನ್ನು ಸೃಷ್ಟಿ ಮಾಡಿರುವ ಆರೋಪಿಗಳು, ಸಾವಿರಾರು ಗ್ರಾಹಕರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ.
ವೆಬ್ಸೈಟ್ ಮತ್ತು ಆ್ಯಪ್ ಬಳಸಿ ಮೋಸ:
ಅನಸ್ ಅಹ್ಮದ್‌ನನ್ನು ಮದುವೆಯಾಗಿರುವ ಕ್ಸಿಯೋಲಿನ್, ಡಬ್ಲ್ಯುಪಿ ರಮ್ಮಿ ಎನ್ನುವ ಕಂಪನಿ ತೆರೆದಿದ್ದಾಳೆ. ಅದಕ್ಕೆ ಪತಿ, ಆಕೆ ಹಾಗೆಯೇ ಸಂಬಂಧಿಕರು ಹಾಗೂ ಪರಿಚಯಸ್ಥರು ನಿರ್ದೇಶಕರಿದ್ದಾರೆ. ಪ್ಲೇ ರಮ್ಮಿ ಗೇಮ್ ಡಾಟ್ ಕಾಮ್ ಜಾಲತಾಣ ಹಾಗೂ ಆ್ಯಪ್ ತಂದಿದ್ದ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆದಾಯ ನೀಡುವುದಾಗಿ ಜಾಹಿರಾತು ನೀಡಿ ಆನ್‌ಲೈನ್ ಜೂಜು ಆಡಿಸುತ್ತಿದ್ದರು. ಜೂಜಿನಲ್ಲಿ ಸೋತವರು ಹಾಗೂ ಗೆದ್ದವರ ನಡುವೆ ಹಣದ ವಿನಿಮಯವಿದ್ದಾಗ ರೇಜೋರ್‌ಪೇ ಕಂಪನಿಯೇ ನೋಡಿಕೊಳ್ಳುತ್ತಿತ್ತು. ಅದಕ್ಕಾಗಿ ಬ್ಯಾಂಕ್ ಖಾತೆ, ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಹೀಗೆ ಹಲವು ಪೇಮೆಂಟ್ ಗೇಟ್ ವೇ ಬಳಸಲಾಗುತ್ತಿತ್ತು.
ಆನ್‌ಲೈನ್ ಜೂಜಿನಲ್ಲಿ ಹಣ ಸಂಪಾದಿಸುತ್ತಿದ್ದ ಕ್ಸಿಯೋಲಿನ್ ಹಾಗೂ ಅನಸ್ ಅಹ್ಮದ್ ಇನ್ನಿತರ ಆರೋಪಿಗಳ ಜೊತೆ ಸೇರಿಕೊಂಡು ಬುಲ್‌ಫಿನ್ಚ್ ಸಾಫ್ಟ್‌ವೇರ್, ಹೆಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿಪ್ಬೋರ್ಡ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಕಂಪನಿ ತೆರೆದಿದ್ದಾರೆ. ಈ ಮೂಲಕ ಪವರ್ ಬ್ಯಾಂಕ್ ಆ್ಯಪ್ ರೂಪಿಸಿ ವಂಚಿಸಿದ್ದಾರೆ.
ಪವರ್ ಬ್ಯಾಂಕ್ ಬಂದ್ :
ಗೂಗಲ್ ಪ್ಲೇ ಸ್ಟೋರ್ನಲ್ಲಿ ಹಣ ಹೂಡಿಕೆ ಮಾಡಿಕೊಳ್ಳುವಂತಹ ಅಪ್ಲಿಕೇಷನ್ ಕೂಡ ತಯಾರಿಸಿ ಆರಂಭಿಕವಾಗಿ ಹೊಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಬಡ್ಡಿ ಪಾವತಿ ಕೂಡ ಮಾಡಿದ್ದರು. ಹೆಚ್ಚು ಹೊಡಿಕೆಯ ನಂತರ ಬಡ್ಡಿ ನೀಡದೆ ಹೊಡಿಕೆ ಹಣವನ್ನು ಸೇಲ್/ಬೇನಾಮಿ ಕಂಪನಿಗಳನ್ನು ತೆರೆಯುತ್ತಿದ್ದರು. ಸಾರ್ವಜನಿಕರಿಂದ ಹೂಡಿಕೆ ಮಾಡಿಕೊಂಡ ನಂತರ ಬಡ್ಡಿ ನೀಡದೆ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಕ್ಲೋಸ್ ಮಾಡುತ್ತಿದ್ದರು. ರಾಜ್ಯದಾದ್ಯಂತ ಸಾವಿರಾರು ಮಂದಿ ಪವರ್ ಬ್ಯಾಂಕ್ ಆಪ್ ಮೂಲಕ 3 ಸಾವಿರದಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆರ್‌ಬಿಐ ನಿಯಮದ ಕಾರಣ ನೀಡಿ ಏಕಾಏಕಿ ಆ್ಯಪ್ ಕಾರ್ಯಾಚರಣೆ ಬಂದ್ ಮಾಡಲಾಗಿದೆ.
ಈಗಾಗಲೆ ಸಿಐಡಿ ಸೈಬರ್ ಕ್ರೈಂ ವಿಭಾಗ ಮಾತ್ರವಲ್ಲದೇ ರಾಜಧಾನಿಯ ವಿವಿಧ ಠಾಣೆಗಳಲ್ಲಿ ಹಾಗೂ ರಾಜ್ಯದ ವಿವಿಧ ನಗರಗಳಲ್ಲೂ ವಂಚನೆ ಸಂಬಂಧ ಎಫ್‌ಐಆರ್ ದಾಖಲಾಗಿವೆ. ಪವರ್ ಬ್ಯಾಂಕ್, ಸನ್‌ಫ್ಯಾಕ್ಟರಿ, ಈಜಿಪ್ಲಾನ್ ಸೇರಿದಂತೆ ವಿವಿಧ ಆ್ಯಪ್ ಮೂಲಕ ದೆಹಲಿಯಲ್ಲಿ 150 ಕೋಟಿ ಹಾಗೂ ಉತ್ತರಾಖಂಡನಲ್ಲಿ 250 ಕೋಟಿ ವಂಚನೆ ಆಗಿದ್ದು, ಎರಡೂ ರಾಜ್ಯದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೃತ್ಯವನ್ನು ಭೇದಿಸಿ ಆರೋಪಿಗಳ ಸಾವಿರಾರು ಖಾತೆಗಳನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ. ಕರ್ನಾಟಕದ ಸಿಐಡಿ ಸೈಬರ್ ಕ್ರೈಂ ಪೊಲೀಸರು ಪ್ರಕರಣದ ಬೆನ್ನು ಬಿದ್ದು ಇನ್ನೂ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ.
ಇದನ್ನೂ ಓದಿ:ಕೋವ್ಯಾಕ್ಸಿನ್ನಲ್ಲಿ ವೈಜ್ಞಾನಿಕ ಮಾನದಂಡ ಕಾಯ್ದುಕೊಳ್ಳಲು ಬದ್ಧ: ಭಾರತ್ ಬಯೋಟೆಕ್ ಆಶ್ವಾಸನೆ