ಕರ್ನಾಟಕ

karnataka

ವರ್ಷದ ಕೊನೆ ದಿನ ಎಂಎಸ್​ಐಎಲ್​ನಿಂದ ದಾಖಲೆಯ 18 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟ

By ETV Bharat Karnataka Team

Published : Jan 1, 2024, 9:26 PM IST

ಡಿಸೆಂಬರ್​ 31ರಂದು ಎಂಎಸ್​​ಐಎಲ್ ರಾಜ್ಯಾದ್ಯಂತ ದಾಖಲೆಯ 18.85 ಕೋಟಿ ರೂ.ಗಳ ಮದ್ಯ ಮಾರಾಟ ಮಾಡಿದೆ.

rs-18-dot-85-crore-alcohol-sales-from-msil-on-the-last-day-of-the-year
ವರ್ಷದ ಕೊನೆ ದಿನ ಎಂಎಸ್​ಐಎಲ್​ನಿಂದ ದಾಖಲೆಯ 18.85 ಕೋಟಿ ರೂ. ಮದ್ಯ ಮಾರಾಟ

ಬೆಂಗಳೂರು :ರಾಜ್ಯದಲ್ಲಿರುವ 1031 ಎಂಎಸ್​​ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ 18.85 ಕೋಟಿ ರೂಪಾಯಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂಎಸ್​ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಸುಮಾರು 4.34 ಕೋಟಿ ರೂಪಾಯಿ ಹೆಚ್ಚಳವಾಗಿದೆ. 2022ರ ಡಿಸೆಂಬರ್​ 31ರಂದು 14.51 ಕೋಟಿ ರೂಪಾಯಿ ಮೊತ್ತದ ಮದ್ಯ ಮಾರಾಟವಾಗಿತ್ತು ಎಂದು ಹೇಳಿದ್ದಾರೆ.

ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ 11.66 ಲಕ್ಷ ರೂ.ಗಳ ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ 9.96 ಲಕ್ಷ ರೂಪಾಯಿ ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ. ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ 1.82 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಕಳೆದ ವರ್ಷದ ಇದೇ ದಿನ ಜಿಲ್ಲೆಯಲ್ಲಿ 1.35 ಕೋಟಿ ರೂಪಾಯಿ ಮದ್ಯ ಮಾರಾಟವಾಗಿತ್ತು ಎಂದಿದ್ದಾರೆ.

ಉನ್ನತ ದರ್ಜೆಗೇರಿಸಿ ಜನವರಿ 1ರಂದು ಉದ್ಘಾಟನೆಗೊಂಡ ಬೆಂಗಳೂರು ಬಸವೇಶ್ವರ ನಗರದ ಎಂಎಸ್​ಐಎಲ್ ಬೋಟಿಕ್​ನಲ್ಲಿ ಭಾನುವಾರ 3.5 ಲಕ್ಷ ರೂಪಾಯಿ ಮೊತ್ತದ ಮದ್ಯ ಮಾರಾಟವಾಗಿದೆ. ಕಳೆದ ವರ್ಷದ ಇದೇ ದಿನ ಈ ಮಳಿಗೆಯಲ್ಲಿ 2.59 ರೂ. ಲಕ್ಷದ ಮದ್ಯ ಮಾರಾಟವಾಗಿತ್ತು ಎಂದು ಹೇಳಿದ್ದಾರೆ. ಉಳಿದ ದಿನಗಳಂದು ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಆಗುವ ಮದ್ಯ ಮಾರಾಟದ ವಹಿವಾಟು 8 ಕೋಟಿಯಷ್ಟಿರುತ್ತದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು 18.8 ಕೋಟಿಗೆ ತಲುಪಿದೆ ಎಂದಿದ್ದಾರೆ.

ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ :ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಇಲ್ಲಿನ ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆಯನ್ನು ಆರಂಭಿಸಿದೆ. ಈ ಮಳಿಗೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಗದ ಗ್ರಾಹಕರನ್ನು ಸೆಳೆಯುವುದು ಸಂಸ್ಥೆಯ ಗುರಿಯಾಗಿದೆ. ಇಲ್ಲಿ ಸಾಮಾನ್ಯ ಬೆಲೆಗೆ ದುಬಾರಿ ಮದ್ಯಗಳು ಲಭ್ಯವಾಗಲಿದೆ. ಇದರ ಜೊತೆಗೆ ರಾಜ್ಯದೆಲ್ಲೆಡೆ ಇರುವ 200 ಮಳಿಗೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮಾಡಲಾಗುತ್ತದೆ. ಇದರಲ್ಲಿ ಬೆಂಗಳೂರಿನಲ್ಲೇ 20 ಮಳಿಗೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :ಹೊಸ ವರ್ಷಕ್ಕೆ ಎಂಎಸ್ಐಎಲ್ ಗಿಫ್ಟ್​: ಮೊದಲ ಸರ್ಕಾರಿ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ ಉದ್ಘಾಟನೆ

ABOUT THE AUTHOR

...view details