ಬೆಂಗಳೂರು: ನಾನು ನಿಮ್ಮ ಸೇವೆ ಮಾಡಲು ಬಯಸಿದ್ದು, ನಿಮ್ಮ ಪ್ರೀತಿ ವಿಶ್ವಾಸವನ್ನು ಎಂದಿಗೂ ಹಣ, ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ತಿಳಿಸಿದ್ದಾರೆ.
ನಿಮ್ಮ ಪ್ರೀತಿ ವಿಶ್ವಾಸವನ್ನು ಹಣ, ಅಧಿಕಾರದ ಆಸೆಗೆ ಮಾರಿಕೊಳ್ಳೋಲ್ಲ: ಕುಸುಮಾ - ರಾಜರಾಜೇಶ್ವರಿ ನಗರ ಉಪಚುನಾವಣೆ
ನವೆಂಬರ್ 3 ರಂದು ನಡೆಯುವ ಚುನಾವಣೆಯಲ್ಲಿ ಕ್ರಮಸಂಖ್ಯೆ ಒಂದು ಹಸ್ತದ ಗುರುತಿಗೆ ಮತ ಹಾಕಿ. ನನ್ನನ್ನು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನಲೆಯಲ್ಲಿ ಭಾನುವಾರ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜತೆ ಪ್ರಚಾರ ನಡೆಸಿದ ಕುಸುಮಾ ಅವರು ಮಾತನಾಡಿ, ಕ್ಷೇತ್ರದ ಜನರಿಗೆ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಹಾಗೂ ರಾಜರಾಜೇಶ್ವರಿ ತಾಯಿ ಆಶೀರ್ವದಿಸಿ ಆಯುಷ್ಯ ಆರೋಗ್ಯ, ಐಶ್ವರ್ಯ ಕರುಣಿಸಲಿ. ನಾನು ಯಾವುದೇ ದುರಾಲೋಚನೆ ಇಟ್ಟುಕೊಂಡು ಈ ಚುನಾವಣೆಗೆ ಬಂದಿಲ್ಲ. ನಿಮ್ಮ ಸೇವೆಗೆ ನಾನು ಬಂದಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಯತ್ನ ಪಡುತ್ತೇನೆ. ನೀವು ಕೊಡುವ ಮತವನ್ನು ಮಾರಿಕೊಳ್ಳುವುದಿಲ್ಲ. ನಿಮ್ಮ ನೋವು, ದುಃಖದಲ್ಲಿ ನಿಮ್ಮ ಮನೆ ಮಗಳಂತೆ ಜೊತೆಗಿರುತ್ತೇನೆ. ನಿಮ್ಮ ಮಗಳಿಗೆ ನೀಡುವ ಪ್ರೋತ್ಸಾಹವನ್ನೇ ನನಗೂ ನೀಡಿ ಎಂದರು.
ಮಳೆಯಲ್ಲೂ ಪ್ರಚಾರ: ಮತ್ತಿಕೆರೆಯ ಚೌಡೇಶ್ವರಿ ನಗರದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಕುಸುಮ ಹನುಮಂತರಾಯಪ್ಪ ಪ್ರಚಾರ ನಡೆಸಿದರು. ಈ ಸಂದರ್ಭ ಧಾರಾಕಾರ ಮಳೆ ಸುರಿಯಿತು. ಮಳೆಯ ನಡುವೆಯೂ ಪ್ರಚಾರ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮುಂದುವರಿಸಿದರು.