ಬೆಂಗಳೂರು:ಮುನಿರತ್ನ ಹಾಗೂ ರಾಜೇಶ್ ಗೌಡ ಇಂದು ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಆರ್.ಆರ್.ನಗರ ನೂತನ ಶಾಸಕ ಮುನಿರತ್ನ ಹಾಗೂ ಶಿರಾ ಕ್ಷೇತ್ರದ ಶಾಸಕ ಡಾ.ಸಿ.ಎಂ. ರಾಜೇಶ್ಗೌಡ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣ ವಚನ ಬೋಧಿಸಿದರು.
ಮುನಿರತ್ನ, ರಾಜೇಶ್ಗೌಡ ಪ್ರಮಾಣ ವಚನ ಸ್ವೀಕಾರ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ:
ಮಾಧ್ಯಮದವರ ಬಳಿ ಮಾತನಾಡಿದ ಶಾಸಕ ಮುನಿರತ್ನ, ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು, ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನಮ್ಮ ನಾಯಕರು ಏನು ತೀರ್ಮಾನ ಮಾಡ್ತಾರೊ ಅದಕ್ಕೆ ಬದ್ದವಾಗಿರುತ್ತೇನೆ ಎಂದರು. ಸಿಎಂ ಅವರು ಯಾವ ಖಾತೆ ಕೊಡ್ತಾರೊ ಅದನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.
ನಾವು ಮೂವರು ಒಟ್ಟಾಗಿ ಇದ್ದೇವೆ:
ನಾನು, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಮೂವರು ಒಟ್ಟಾಗಿದ್ದೇವೆ ಸಿದ್ದಗಂಗಾ ಮಠದಲ್ಲಿ ನಾನು ಎಸ್.ಟಿ.ಸೋಮಶೇಖರ್ ಅವರ ಹೇಳಿಕೆ ನೋಡಿದ್ದೇನೆ. ನಾವು ಮೂವರು ಒಟ್ಟಾಗಿ ಇದ್ದೇವೆ ಎಂದು ಸ್ಪಷ್ಟಪಡಿಸಿದರು.
ಮೂವರು ಒಟ್ಟಾಗಿ ರಾಜೀನಾಮೆ ನೀಡಿದ್ದೇವೆ. ಜೊತೆಗೆ ಇದ್ದೇವೆ. ಎಸ್ಬಿಎಂನಲ್ಲಿ ಬಿರುಕು ಬಿಟ್ಟಿಲ್ಲ. ಇಲ್ಲಿ ನಾನು ಅನ್ನೋದಿಲ್ಲ, ನಾವು ಅನ್ನೋದೆ ಮುಖ್ಯ. ಎಸ್ಬಿಎಂ ಲೋಗೊ ಒಂದೇ ಅದು ಬಿಜೆಪಿ. ಬೇಕಾದರೆ ನಾಳೆ ಮೂವರು ಸುದ್ದಿಗೋಷ್ಠಿ ಮಾಡ್ತೇವೆ ಎಂದರು.
ಇದೇ ವೇಳೆ, ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಡಿ.ಕೆ. ಸುರೇಶ್ಗೆ ಮುನಿರತ್ನ ಟಾಂಗ್ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಅವರು 2.5 ಲಕ್ಷ ಮತಗಳಿಂದ ಗೆದ್ದಾಗ ಇವಿಎಂ ಸಮಸ್ಯೆ ಆಗಲಿಲ್ಲ. ಈಗ ನಾನು ಗೆದ್ದಾಗ ಇವಿಎಂ ಮೇಲೆ ಸಂದೇಹ ವ್ಯಕ್ತಪಡಿಸಿದ್ದಾರೆ ಎಂದು ಕಿಡಿ ಕಾರಿದರು.