ಬೆಂಗಳೂರು: ಆರ್ಆರ್ ನಗರ ಉಪಚುನಾವಣೆ ರಂಗೇರುತ್ತಿದೆ. ಜಾಲಹಳ್ಳಿಯಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಮುನಿರತ್ನ ವಿರುದ್ಧ ಹರಿಹಾಯ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರಿನ ಮತದಾರರು ಪ್ರಜ್ಞಾವಂತ ಮತದಾರರು. ನಿತ್ಯ ಬೆಂಗಳೂರಿನಲ್ಲಿ ಏನ್ ನಡೀತಿದೆ. ಇಲ್ಲಿ ಶಾಸಕರಾಗಿದ್ದವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಅನ್ನೋದು ತಿಳ್ಕೊಂಡಿದ್ದಾರೆ. ಆರ್ ಆರ್ ನಗರದಲ್ಲಿ ಅಪರಾಧ ರಾಜಕಾರಣ ಜಾಸ್ತಿಯಾಗಿದೆ. ಸುಳ್ಳು ಕೇಸ್‌ಗಳನ್ನು ಹಾಕಿಸೋದು. ಭಯದ ವಾತಾವರಣ ನಿರ್ಮಿಸೋದು. ಜನರನ್ನ ಹೆದರಿಸಿ ಮತಗಟ್ಟೆಗೆ ಬಾರದಂತೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಾಲಹಳ್ಳಿ ರೋಡ್ ಶೋನಲ್ಲಿ ಮುನಿರತ್ನ ವಿರುದ್ಧ ಸಿದ್ದು ವಾಗ್ದಾಳಿ ಜನರನ್ನ ಹೆದರಿಸಿ, ಬೆದರಿಸಿ ಗೆಲ್ಲೋಕೆ ಹೊರಟ್ಟಿದ್ದಾರೆ ನಮ್ಮ ವಿರೋಧಿ ಅಭ್ಯರ್ಥಿ. ಮೊನ್ನೆ ನಾನು ಪ್ರಚಾರ ಮಾಡ್ತಿದ್ದಾಗ ಒಂದು ಗುಂಪು ನನಗೆ ಅಡ್ಡಿ ಮಾಡಿದ್ರು. ಆಗ ಪೊಲೀಸನವರಿಗೆ ನಾನು ಹೇಳಿದೆ, ಶಾಸಕರಾದವರು ಇಲ್ಲೇ ಗೂಟ ಹೊಡ್ಕೊಂಡು ಕೂರಲ್ಲ. ನಿಮಗೆ ಪೋಸ್ಟಿಂಗ್ ಕೊಡಿಸಿದ್ದಾರೆ ಎಂದು ಅವರ ಪರವಾಗಿ ಕೆಲಸ ಮಾಡಿದ್ರೇ, ಮುಂದಿನ ದಿನಗಳಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತೆ. ಕಾನೂನು ಬಿಟ್ಟು ಕೆಲಸ ಮಾಡಿದ್ರೇ ಕೆಟ್ಟ ದಿನಗಳನ್ನ ಎದುರಿಸಬೇಕಾಗುತ್ತೆ ಅನ್ನೋದನ್ನ ಹೇಳಿದೆ ಎಂದರು.
ಮುನಿರತ್ನ ಹೆದರಿಸಿ, ಬೆದರಿಸಿ ಗೆಲ್ಲಬೋದು ಅನ್ಕೊಂಡಿದ್ರೇ ಅದು ನಿನ್ನ ಮೂರ್ಖತನ. ನಿನಗೆ ಮುನಿರತ್ನಂ ನಾಯ್ಡು ಅಂತಾ ವೋಟ್ ಹಾಕಿಲ್ಲ. ನೀನು ಕಾಂಗ್ರೆಸ್ ಅಂತಾ ವೋಟ್ ಹಾಕಿದ್ರೂ. ಅದನ್ನ ಮರಿಬೇಡಪ್ಪ ಮುನಿರತ್ನ. ಅಭಿವೃದ್ಧಿ ಮಾಡಿದ್ದೀನಿ.. ಅಭಿವೃದ್ಧಿ ಮಾಡಿದ್ದೀನಿ ಅಂತಾ ಎಲ್ಲ ಕಡೆ ಹೇಳ್ಕೊಂಡು ಓಡಾಡ್ತಿಯಾ. ನಿನಗೆ ದುಡ್ಡು ಕೊಟ್ಟಿದ್ದು ಯಾರಪ್ಪ ಎಂದು ಪ್ರಶ್ನಿಸಿದರು.
ಆರ್ಆರ್ ನಗರ ಕಾಂಗ್ರೆಸ್ ಭದ್ರಕೋಟೆ. ನಿನ್ನ ಬದಲಾವಣೆ ಮಾಡ್ತಾರೆ. ಕಣ್ಣೀರು ಬೇರೆ ಹಾಕ್ತೀಯಾ. ಕಣ್ಣೀರು ಹಾಕಿದ್ರೇ ಜನ ಗೆಲ್ಲಿಸ್ತಾರೆ ಅನ್ಕೊಂಡಿದ್ಯಾ?. ಕಾಂಗ್ರೆಸ್ ನನ್ನ ತಾಯಿ ಅಂತಾ ಹೇಳ್ತಿದ್ದೆ. ಅಂತಹ ತಾಯಿಗೆ ಮೋಸ ಮಾಡಿದೀಯಾ ಅಂತಾ ಹೇಳಿರೋದು. ನಿನ್ನ ತಾಯಿಗೆ ದ್ರೋಹ ಅಂತಲ್ಲ ಎಂದು ತಾಯಿ - ತಂದೆಯ ರಾಜಕೀಯಕ್ಕೆ ಸಮಜಾಯಿಷಿ ನೀಡಿದರು.
ಇಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ, ಗೋರಗುಂಟೆಪಾಳ್ಯ, ಹೆಚ್.ಎಂ.ಟಿ. ವಾರ್ಡ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹೆಚ್. ಮತ ಯಾಚಿಸಿದರು. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಮುಖಂಡರು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.