ಬೆಂಗಳೂರು: ಸುಲಿಗೆ ಪ್ರಕರಣದಲ್ಲಿ ಮಹಜರು ನಡೆಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಗಜೀವನರಾಮ್ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಫರ್ವೇಜ್ ಪಾಷಾ ಗುಂಡೇಟಿಗೆ ಒಳಗಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾನ್ಸ್ಟೇಬಲ್ ಪರಮೇಶ್ ಎಂಬುವರಿಗೂ ಗಾಯವಾಗಿದೆ.
ಕಳೆದ ತಿಂಗಳ 30 ರಂದು ಕೇರಳದಿಂದ ಬಸ್ ಮೂಲಕ ಲಾಲ್ ಬಾಗ್ ರಸ್ತೆಯಲ್ಲಿ ಇಳಿದು ಕ್ಯಾಬ್ಗೆ ಕಾಯುತ್ತಿದ್ದ ಫಯಾಜ್ ಮೊಹಮ್ಮದ್ ಎಂಬುವರನ್ನು ಗುರಿಯಾಗಿಸಿಕೊಂಡ ಫರ್ವೇಜ್ ಹಾಗೂ ಆತನ ಸಹಚರರು ಮೊಬೈಲ್ ಹಾಗೂ ಒಂದು ಸಾವಿರ ನಗದು ದೋಚಿ ಪರಾರಿಯಾಗಿದ್ದರು.
ಇದನ್ನೂ ಓದಿ:ಅಬ್ಬಬ್ಬಾ ಲಾಟ್ರಿ; ಒಂದೇ ರಾತ್ರಿಗೆ 5 ಕೋಟಿ ರೂಪಾಯಿ ಗೆದ್ದ ಮಾಜಿ ಸೈನಿಕ..!
ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಸುಲಿಗೆ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎ.ರಾಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಮಹಜರಿಗಾಗಿ ಬನಶಂಕರಿ ಆರನೇ ಸ್ಟೇಜ್ ಬಳಿ ಕರೆದೊಯ್ದಾಗ ರೌಡಿಶೀಟರ್ ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೂ ಹಲ್ಲೆ ಮುಂದುವರೆಸಿದ್ದರಿಂದ ರೌಡಿಶೀಟರ್ ಎಡಗಾಲಿಗೆ ಗುಂಡು ಹಾರಿಸಿ ಇನ್ಸ್ಪೆಕ್ಟರ್ ಎಂ.ರಾಜು ನೇತೃತ್ವದ ತಂಡ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.