ಬೆಂಗಳೂರು:ಇಂದು ಬೆಳಗ್ಗೆ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿರುವ ಬೆಂಗಳೂರು ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವೇಳೆ, ಬೆಳಗ್ಗೆಯೇ ತೆರೆದಿದ್ದ ವೈನ್ಶಾಪ್ಗಳ ಮೇಲೂ ಪ್ರಕರಣ ದಾಖಲಿಸಿದ್ದಾರೆ.
ಬೆಳ್ಳಂಬೆಳಗ್ಗೆ 180 ರೌಡಿಗಳ ಮನೆ ಮೇಲೆ ರೇಡ್ ಮಾಡಿ, ಅಪರಾಧ ಚಟುವಟಿಕೆ ಮುಂದುವರೆಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾಗಿ ಡಿ.ಸಿ.ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಪಶ್ಚಿಮ ವಿಭಾಗದ ಕಾಟನ್ ಪೇಟೆ , ಚಾಮರಾಜಪೇಟೆ, ಜೆ.ಜೆ ನಗರ, ಕೆ.ಪಿ ಅಗ್ರಹಾರ, ಮಾಗಡಿ ರಸ್ತೆಯ ಪೊಲೀಸರು ಸೇರಿದಂತೆ ವಲಯದ ಸಿಬ್ಬಂದಿ 22 ಕ್ಕೂ ಹೆಚ್ಚು ಡ್ರಗ್ ಪೆಡ್ಲರ್ಗಳನ್ನೂ ವಶಕ್ಕೆ ಪಡೆದು, 180ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರು ಎಸಿಪಿಗಳ ನೇತೃತ್ವದಲ್ಲಿ 600 ಕ್ಕೂ ಹೆಚ್ಚು ಸಿಬ್ಬಂದಿ ಬೆಳಗ್ಗೆ 5 ಗಂಟೆಯಿಂದ ಅಂಜಪ್ಪ ಗಾರ್ಡನ್, ನೇತಾಜಿ ನಗರ, ಗೋಪಾಲಪುರ, ಶ್ಯಾಮಣ್ಣ ಗಾರ್ಡನ್, ಬಾಪೂಜಿ ನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದಿದ್ದಾರೆ.