ಬೆಂಗಳೂರು: ಮಾರಕಾಸ್ತ್ರಗಳಿಂದ ರೌಡಿ ಶೀಟರ್ ಭೀಕರ ಹತ್ಯೆ ಬೆಂಗಳೂರು:ಚುನಾವಣೆ ಸಮಯದಲ್ಲಿ ಗಡಿಪಾರು ಆದೇಶ ನೀಡಲಾಗಿದ್ದ ರೌಡಿಶೀಟರ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಹಲಸೂರಿನ ಜೋಗುಪಾಳ್ಯ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರ್ತಿಕ್ ಹಲಸೂರು ಕೊಲೆಯಾದ ರೌಡಿ ಶೀಟರ್. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂದು ಸಂಜೆ 6 ಗಂಟೆಯ ಸಮಯ ಹಲಸೂರಿನ ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಕಾರ್ತಿಕ್ ನಡೆದುಕೊಂಡು ಬರುತ್ತಿದ್ದ. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಏಕಾಏಕಿ ಮೇಲೆರಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಾರ್ತಿಕ್ ಪಕ್ಕದಲ್ಲೇ ಇದ್ದ ಗಲ್ಲಿಯಲ್ಲಿ ಓಡಿಹೋಗಿದ್ದ. ಹಿಮ್ಮೆಟ್ಟಿ ಬಂದ ಹಂತಕರು ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯಾದ ರೌಡಿ ಶೀಟರ್ ಮೇಲೆ ಅತ್ಯಾಚಾರ, ಕೊಲೆ, ಡಕಾಯಿತಿ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 11 ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲದೇ ಚುನಾವಣೆ ಸಮಯದಲ್ಲಿ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಗಡಿಪಾರು ಮಾಡಿ ನೋಟಿಸ್ ಕೂಡ ನೀಡಿದ್ದರು.
ಇದನ್ನೂ ಓದಿ:ಯುವಕನನ್ನು ಕೊಂದು ಮೃತನ ತಾಯಿ ಜೊತೆ ಹುಡುಕಾಟ ನಡೆಸಿದ್ದ ಹಂತಕ ಸೇರಿ ಮೂವರ ಬಂಧನ
ಘಟನೆ ಬಗ್ಗೆ ಮಾತನಾಡಿದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್, "ಹತ್ಯೆಯಾದ ಕಾರ್ತಿಕ್ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳು ದಾಖಲಾಗಿತ್ತು. ಈ ಮುಂಚೆ ಗುಂಡಾ ಕಾಯಿದೆ ಅಡಿಯಲ್ಲಿ 2019ರಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. 2021-22ರಲ್ಲಿ ಚಟುವಟಿಕೆಯನ್ನು ನಿಯಂತ್ರಿಸಲು ಗಡಿಪಾರು ಕೂಡ ಮಾಡಿದ್ದೆವು. ಅಷ್ಟೇ ಅಲ್ಲದೇ ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು" ಎಂದು ತಿಳಿಸಿದರು.
ವೃದ್ಧನ ಕೊಲೆ: ಬೆಂಗಳೂರಿನ ಇನ್ನೊಂದು ಪ್ರಕರಣದಲ್ಲಿ ಮನೆ ಮುಂದೆ ನಾಯಿ ಕರೆದುಕೊಂಡು ಗಲೀಜು ಮಾಡಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಬ್ಯಾಟ್ನಿಂದ ಹೊಡೆದು ಹಿರಿಯ ನಾಗರಿರೊಬ್ಬರ ಹತ್ಯೆ ಮಾಡಲಾಗಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಲದೇವನಹಳ್ಳಿಯ ಗಣಪತಿನಗರ ನಿವಾಸಿ 67 ವರ್ಷದ ಮುನಿರಾಜು ಕೊಲೆಯಾದವರು. ಘಟನೆಯಲ್ಲಿ ಮುರುಳಿ ಎಂಬಾತ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯವೆಸಗಿದ ಸಂಬಂಧ ಪ್ರಮೋದ್, ರವಿಕುಮಾರ್ ಹಾಗೂ ಈತನ ಪತ್ನಿ ಪಲ್ಲವಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಪ್ರತ್ಯೇಕ ರಸ್ತೆ ಅಪಘಾತದಿಂದ ಉದ್ವಿಗ್ನ ಪರಿಸ್ಥಿತಿ: ಗಾಳಿಯಲ್ಲಿ ಗುಂಡು, ಪೊಲೀಸ್ ವ್ಯಾನ್ ಮೇಲೆ ದಾಳಿ