ಬೆಂಗಳೂರು: ರೌಡಿಶೀಟರ್ವೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಸಂಪಿಗೆಹಳ್ಳಿ ಬಳಿ ಸೋಮವಾರ ರಾತ್ರಿ ನಡೆದಿದೆ.
ಭರತ್ ಅಲಿಯಾಸ್ ಕೋಗಿಲು ಭರತ್ ಎಂಬಾತನೆ (28) ಕೊಲೆಯಾದ ರೌಡಿಶೀಟರ್. ಸಂಪಿಗೆಹಳ್ಳಿಯ ವಿಜಯ ವೈನ್ಸ್ ಮುಂಭಾಗ ಭರತ್ ನಿಂತಿರುವಾಗ ಬೈಕ್ನಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳು ಆತನನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯಾದ ಭರತ್ ಯಲಹಂಕ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಈತನ ಮೇಲೆ ಯಲಹಂಕ, ಸಂಪಿಗೆ ಹಳ್ಳಿ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ಕೊಲೆ, ದರೋಡೆ, ಬೆದರಿಕೆಯೊಡ್ಡಿರುವ ಪ್ರಕರಣಗಳು ದಾಖಲಾಗಿವೆ.
ಸದ್ಯ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೇದ್ವೇಷದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ಇದ್ದು, ಪೊಲೀಸರು ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ.