ಬೆಂಗಳೂರು:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಹೊರ ಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಸಿದ್ದಾಪುರ ಮಹೇಶ್ ಹತ್ಯೆಯಾದ ರೌಡಿಶೀಟರ್. ಮಹೇಶ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಶುಕ್ರವಾರ ಬಿಡುಗಡೆಯಾಗಿ ಹೊಸ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಮಹೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್‌ನಲ್ಲಿ ಮಹೇಶ್ ಲೀಡರ್ ಆಗಿದ್ದ ಎಂದು ತಿಳಿದು ಬಂದಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಂತಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆಗೆ ಇಳಿದಿರುವುದಾಗಿ ನಗರ ಆಗ್ನೇಯ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎದುರಾಳಿ ಗ್ಯಾಂಗ್'ನ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಮೋಹನ ಅಲಿಯಾಸ್ ಡಬಲ್ ಮೀಟರ್ ಮೋಹನ್, ಸುನೀಲ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಳೇ ವೈಷಮ್ಯಕ್ಕೆ ಹತ್ಯೆ:2019ರ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಹಾಸನದ ಫಾರ್ಮ್ ಹೌಸ್ನಲ್ಲಿ ರೌಡಿಶೀಟರ್ ಲಿಂಗನನ್ನ ವಿಲ್ಸನ್ ಗಾರ್ಡನ್ ನಾಗನ ಬಣ ಹತ್ಯೆ ಮಾಡಿತ್ತು. ಮೋಹನ್, ನಂಜಪ್ಪ, ಕಣ್ಣನ್, ಕುಮಾರ್, ಪ್ರದೀಪ ಗ್ರೇಸ್ ವಾಲ್ಟರ್, ಸುನೀಲ್ ಸೇರಿದಂತೆ 16 ಜನರ ತಂಡ ಲಿಂಗನನ್ನ ಕೊಲೆ ಮಾಡಿತ್ತು. ಹತ್ಯೆಗೆ ಪ್ರತಿಕಾರವಾಗಿ ಆತನ ಬಣದಲ್ಲಿದ್ದ ಸಿದ್ದಾಪುರ ಮಹೇಶ, ವಿಲ್ಸನ್ ಗಾರ್ಡನ್ ನಾಗನ ಅತ್ಯಾಪ್ತನಾಗಿದ್ದ ಮದನ್ ನನ್ನ ಮರ್ಡರ್ ಮಾಡಿದ್ದ. ಇದು ನಾಗನ ಸಿಟ್ಟಿಗೆ ಕಾರಣವಾಗಿತ್ತು. ಅದೇ ಕಾರಣಕ್ಕೆ ತಡರಾತ್ರಿ ಮಹೇಶ ಜೈಲಿನಿಂದ ಹೊರ ಬರುತ್ತಿದ್ದಂತೆ ನಾಗನ ತಂಡದ ಸದಸ್ಯರು ಆತನನ್ನ ಹತ್ಯೆ ಮಾಡಿದ್ದಾರೆ.