ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಪಕ್ಷದ ನೇತೃತ್ವ ವಹಿಸಿರುವವರೇ ರೌಡಿ ಶೀಟರ್: ಶೋಭಾ ಕರಂದ್ಲಾಜೆ - shobha karandlaje

ಕಾಂಗ್ರೆಸ್​ ನಾಯಕರಲ್ಲಿ ರೌಡಿ ಶೀಟರ್​ಗಳ ಪಟ್ಟಿಯೇ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

By

Published : Mar 13, 2023, 5:46 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಫೈಟರ್ ರವಿ ಬಂದಿದ್ದು ಸ್ಥಳೀಯ ವ್ಯವಸ್ಥೆಯ ಲೋಪವೇ ಹೊರತು ಪ್ರಧಾನಿಗಳದ್ದಲ್ಲ. ಇದರಲ್ಲಿ ಮೋದಿ ತಪ್ಪು ಏನೂ ಇಲ್ಲ. ಇಲ್ಲಿ ಮೋದಿ ಸ್ವಾಗತಕ್ಕೆ ಮಾತ್ರ ರೌಡಿಶೀಟರ್ ಬಂದಿದ್ದ. ಆದರೆ, ಕಾಂಗ್ರೆಸ್​ನಲ್ಲಿ ಪಕ್ಷದ ನೇತೃತ್ವ ವಹಿಸಿರುವವರೇ ರೌಡಿ ಶೀಟರ್. ಹಾಗಾಗಿ, ಬಿಜೆಪಿ ವಿರುದ್ಧ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೈಟರ್ ರವಿ ಯಾರು? ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲ. ಸ್ಥಳೀಯರ ಕಣ್ತಪ್ಪಿನಿಂದ ಆಗಿರುವ ಲೋಪ ಅದು. ಎಸ್​ಪಿ ಕೂಡ ಪ್ರಧಾನಿ ಸ್ವಾಗತ ಮಾಡಲು ಆಗಮಿಸುವವರ ಪಟ್ಟಿ ಗಮನಿಸಬೇಕಿತ್ತು. ಆದರೆ, ಗಮನಿಸುವ ಕೆಲಸ ಆಗಿಲ್ಲ. ಅಲ್ಲಿ ಕೊರತೆ ಆಗಿದೆ. ಅದು ಪ್ರಧಾನಿ ಜವಾಬ್ದಾರಿ ಅಲ್ಲ. ಅದು ನಮ್ಮ ಲೋಪ. ಆ ಜವಾಬ್ದಾರಿ ನಮ್ಮದು. ಆ ಲೈನ್ ಅಪ್​ನಲ್ಲಿ ಅವರು ಹೇಗೆ ಬಂದರು. ಯಾಕೆ ಬಂದರು ತಿಳಿದು ಮುಂದೆ ಈ ರೀತಿ ಆಗದಂತೆ ಎಲ್ಲವನ್ನೂ ಸರಿಮಾಡುತ್ತೇವೆ ಎಂದರು.

ಚುನಾವಣಾ ಗಿಮಿಕ್ ಮಾಡುತ್ತಿದ್ದರೆ ಜನ ಪಾಠ ಕಲಿಸಲಿದ್ದಾರೆ: ಇದೇ ವಿಷಯವನ್ನು ಇರಿಸಿಕೊಂಡು ಕಾಂಗ್ರೆಸ್ ಟ್ರೋಲ್ ಮಾಡಬೇಕಿಲ್ಲ. ಅವರ ಕಾರ್ಯಾಧ್ಯಕ್ಷರೇ ರೌಡಿ ಶೀಟರ್ ಆಗಿದ್ದಾರೆ. ಕೈ ನಾಯಕರಲ್ಲಿ ರೌಡಿ ಶೀಟರ್​ಗಳ ಪಟ್ಟಿಯೇ ಇದೆ. ಇಲ್ಲಿ ಮೋದಿ ಭೇಟಿಗೆ ಮಾತ್ರ ರೌಡಿ ಶೀಟರ್ ಬಂದಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಪಕ್ಷದ ನೇತೃತ್ವ ವಹಿಸಿರುವವರೇ ರೌಡಿ ಶೀಟರ್​ನಲ್ಲಿದ್ದಾರೆ. ಹಾಗಾಗಿ, ಕಾಂಗ್ರೆಸ್​ಗೆ ರೌಡಿ ಶೀಟರ್ ಉಲ್ಲೇಖಿಸಿ ಬಿಜೆಪಿ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ನಮ್ಮ ವಿರುದ್ಧ ಬೆರಳು ಮಾಡುವ ಅವರ ಕುರಿತು ಮಾತನಾಡುವಾಗ ಉಳಿದ ನಾಲ್ಕು ಬೆರಳು ಅವರನ್ನು ತೋರಿಸಲಿದೆ ಎನ್ನುವುದು ಅವರಿಗೆ ನೆನಪಿರಲಿ. ಚುನಾವಣಾ ರಾಜಕೀಯ, ಚುನಾವಣಾ ಗಿಮಿಕ್ ಮಾಡುತ್ತಿದ್ದರೆ ಮುಂದೆ ಜನ ಪಾಠ ಕಲಿಸಲಿದ್ದಾರೆ ಎಂದರು.

ಸೋಮಣ್ಣಗೆ ಅಸಮಾಧಾನವಿಲ್ಲ : ವಸತಿ ಸಚಿವ ವಿ ಸೋಮಣ್ಣ ಬಿಜೆಪಿಯ ಉನ್ನತ ನಾಯಕರು. ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಾಗಿನಿಂದ ಒಂದಲ್ಲಾ ಒಂದು ಜವಾಬ್ದಾರಿ ಕೊಡಲಾಗಿದೆ. 2008 ರಲ್ಲಿಯೇ ಅವರು ಸಚಿವರಾಗಿದ್ದರು. ಹಲವಾರು ಜನ ಪಕ್ಷದ ಹಿರಿಯ ನಾಯಕರಿಗೂ ಸಿಗದ ಅವಕಾಶ ಸೋಮಣ್ಣ ಅವರಿಗೆ ಸಿಕ್ಕಿದೆ. ಅದಕ್ಕಾಗಿ ಸೋಮಣ್ಣ ಅವರಿಗೆ ಯಾವುದೇ ಬೇಸರವಿಲ್ಲ. ಇವತ್ತಿಗೂ ಅವರು ಸಚಿವರಾಗಿದ್ದಾರೆ. ಅವರು ಸೋತಾಗಲೂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ನಾವು ಸೋಮಣ್ಣ ಜೊತೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಕ್ಷೇತ್ರದಲ್ಲಿದ್ದಾರೆ. ಕಳೆದ 4.5 ವರ್ಷ ರಾಜ್ಯಾದ್ಯಂತ ಓಡಾಟ ಮಾಡಿದ್ದರು. ವಸತಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಕ್ಷೇತ್ರಕ್ಕೆ ಸಮಯ ನೀಡಿರಲಿಲ್ಲ. ಈಗ ಅವರು ತಮ್ಮ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೂ ಪಕ್ಷದ ಮೇಲೆ ಗೌರವವಿದೆ. ಪಕ್ಷಕ್ಕೂ ಅವರ ಮೇಲೆ ಗೌರವವಿದೆ. ಹಾಗಾಗಿ ಅವರು ಅದೇ ವಿಶ್ವಾಸದಿಂದ ಪಕ್ಷದಲ್ಲಿ ಮುಂದುವರೆಯಲಿದ್ದಾರೆ ಎಂದರು.

ಚುನಾವಣಾ ಕೆಲಸಕ್ಕೆ ವೇಗ :ರಾಜ್ಯದ ಹಲವಾರು ಕಡೆ ವಿವಿಧ ಮೋರ್ಚಾಗಳ ಸಮಾವೇಶ ನಡೆಯುತ್ತಿವೆ. ಬಿಜೆಪಿಯಲ್ಲಿ ಒಂದು ಪದ್ಧತಿ ಇದೆ. ಪ್ರಣಾಳಿಕೆ ಸಿದ್ಧಪಡಿಸುವಾಗ ಜನತೆಯ ಮನವಿ, ನೋವು ಆಲಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ. ಹಾಗಾಗಿ ಬೇರೆ ಬೇರೆ ಕಡೆ ಜನರ ಅಭಿಪ್ರಾಯ ಸಂಗ್ರಹ ಮಾಡುವ ಕಾರ್ಯ ನಡೆಯುತ್ತಿದೆ. ರಾಜ್ಯದ ಹಲವು ಕಡೆ ಬೇರೆ ಬೇರೆ ರೀತಿಯ ಚಟುವಟಿಕೆ ನಡೆಯುತ್ತಿವೆ. ಬೂತ್ ಸಮಿತಿಗಳಲ್ಲಿ ಮತ್ತಷ್ಟು ಜನರನ್ನು ಸೇರಿಸುವ ಕೆಲಸ ನಡೆಯುತ್ತಿದೆ. ಮತದಾರರನ್ನು ಭೇಟಿ ಮಾಡುವ ಕೆಲಸ ನಡೆಯುತ್ತಿದೆ. ಚುನಾವಣಾ ತಯಾರಿ ಬಹಳ ಜೋರಾಗಿ ತೆಗೆದುಕೊಂಡಿದೆ. ಕೇಂದ್ರದ ನಾಯಕರು, ಹಲವು ರಾಜ್ಯದ ಸಿಎಂ ಬಂದು ಬಿಜೆಪಿ ಚುನಾವಣಾ ಕೆಲಸಕ್ಕೆ ವೇಗ ಕೊಡಲಿದ್ದಾರೆ ಎಂದರು.

ಸರ್ಕಾರ ರಚಿಸುವ ವಿಶ್ವಾಸ ನಮಗೆ ಬಂದಿದೆ:ರಾಜ್ಯದಲ್ಲಿ ಜನಾಭಿಪ್ರಾಯ ತುಂಬಾ ಚೆನ್ನಾಗಿ ಸಿಗುತ್ತಿದೆ. ನಾವು ಅತ್ಯಂತ ದುರ್ಬಲವಾಗಿರುವ ಜಿಲ್ಲೆ ಮಂಡ್ಯ. ಆದರೆ, ನಿನ್ನೆ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಿಕ್ಕ ಜನಬೆಂಬಲ ನಮ್ಮ ಉತ್ಸಾಹ ಹೆಚ್ಚಿಸಿದೆ. ಸ್ವಂತ ಕಾಲ ಮೇಲೆ ಸರ್ಕಾರ ರಚಿಸುವ ವಿಶ್ವಾಸ ನಮಗೆ ಬಂದಿದೆ. ಬೇರೆ ಬೇರೆ ವಿಭಾಗದ ಸಭೆ ನಡೆಸಲಾಗಿದೆ. ಎಲ್ಲರಿಗೂ ಬೇರೆ ಬೇರೆ ಗುರಿ ನೀಡಿ ಚುನಾವಣಾ ಕೆಲಸಕ್ಕೆ ವೇಗ ನೀಡುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ರಾಜಕೀಯಕ್ಕೆ ಮತ್ತೆ ಮರಳುತ್ತೀರಾ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಶೋಭಾ ಕರಂದ್ಲಾಜೆ ನಿರಾಕರಿಸಿದರು. ಅಭ್ಯರ್ಥಿಗಳ ಪಟ್ಟಿ ಸಿದ್ಧತೆ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಇದನ್ನೂ ಓದಿ :ಎಲ್ಲರಿಗೂ ಮಕ್ಕಳು ಇರ್ತಾರೆ.. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲವೆಂದರೆ ನನಗೂ ಬೇಡ : ವಿ ಸೋಮಣ್ಣ

ABOUT THE AUTHOR

...view details