ಬೆಂಗಳೂರು:ಇತ್ತೀಚೆಗೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಹರೀಶ್ ಎಂಬಾತನನ್ನು ಐವರು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ರಕ್ಷಿತ್, ಅವಿನಾಶ್, ಇಂದ್ರಜಿತ್ ಸೇರಿದಂತೆ ಐವರು ಕಳೆದ ತಿಂಗಳು ಹರೀಶ್ನನ್ನು ಕೊಲೆ ಮಾಡಿದ್ದರು.
ಯಾವುದೋ ಪ್ರಕರಣ ಸಂಬಂಧ ಬಸವೇಶ್ವರ ನಗರ ನಿವಾಸಿಯಾಗಿದ್ದ ಹರೀಶ್ನನ್ನು ಬಾಣಸವಾಡಿ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು. ಇದರಂತೆ ಠಾಣೆಗೆ ಜುಲೈ 27ರಂದು ಹರೀಶ್ ಬಂದಿದ್ದ. ಈ ವೇಳೆ ರಕ್ಷಿತ್ಗೆ ಕರೆ ಮಾಡಿದ್ದ ಹರೀಶ್, "ನಿನ್ನ ಏರಿಯಾಗೆ ಬಂದಿದ್ದೇನೆ. ನನ್ನ ಕೈಗೆ ಸಿಕ್ಕರೆ ಹೊಡೆದು ಹಾಕುತ್ತೇನೆ" ಎಂದು ಅವಾಝ್ ಹಾಕಿದ್ದನಂತೆ.
ಇದರಿಂದ ಕೋಪಗೊಂಡ ರಕ್ಷಿತ್, ಗ್ಯಾಂಗ್ ಕಟ್ಟಿಕೊಂಡು ಬಂದು ಹರೀಶ್ಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಪೊಲೀಸ್ ಠಾಣೆಯಿಂದ ಹೊರ ಬರುವ ವಿಚಾರ ತಿಳಿದು, ಹರೀಶ್ ಮೇಲೆ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಪ್ರಾಣ ಹೋದರೂ ತಣ್ಣಗಾಗದ ಕೋಪ:ರೌಡಿಶೀಟರ್ ಹರೀಶ್ನನ್ನು ಕೊಲೆ ಮಾಡುವ ಉದ್ದೇಶದಿಂದ ರಕ್ಷಿತ್ ಗ್ಯಾಂಗ್ ಬಾಣಸವಾಡಿ ಸಿಎಂಆರ್ ಕಾಲೇಜು ಬಳಿ ಹೊಂಚು ಹಾಕಿ ಕುಳಿತಿತ್ತು. ಈ ವೇಳೆ ಹರೀಶ್ ಬೈಕ್ನಲ್ಲಿ ಬರುತ್ತಿದ್ದಂತೆ ಏಕಾಏಕಿ ದಾಳಿ ಮಾಡಿದ ಗುಂಪು ಹತ್ಯೆ ಮಾಡಿದೆ. ಹರೀಶ್ ಪ್ರಾಣ ಹೋದರೂ ಸಹ ಕೋಪ ತಣ್ಣಗಾಗದೆ, ರಕ್ಷಿತ್ ತಂಡ ಮತ್ತೆ ಮತ್ತೆ ಮಚ್ಚಿನಿಂದ ಕೊಚ್ಚಿ ಹಾಕಿರುವುದು ವಿಡಿಯೋದಲ್ಲಿ ಕಂಟುಬರುತ್ತದೆ.