ಬೆಂಗಳೂರು: ನಗರದಲ್ಲಿ ಹಫ್ತಾ ವಸೂಲಿ ದಂಧೆ ಇನ್ನೂ ನಿಂತಿರುವಂತೆ ಕಾಣುತ್ತಿಲ್ಲ. ಕೇಳಿದಷ್ಟು ಹಫ್ತಾ ಕೊಡದಿದ್ದರೆ ಹೆಣ ಉರುಳಿಸುವುದಾಗಿ ರೌಡಿಯೊಬ್ಬ ಬೆದರಿಕೆ ಹಾಕಿದ್ದ ಪ್ರಕರಣ ನಡೆದ ಬಗ್ಗೆ ಮಾಹಿತಿ ಬಂದಿದೆ. ಆದರೆ ಸದ್ಯ ಬೆದರಿಕೆ ಹಾಕಿದ ಕಾಟನ್ ಪೇಟೆ ಪೊಲೀಸ್ ಠಾಣೆ ರೌಡಿ ಶೀಟರ್ನನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಹಾಸನ ಮೂಲದ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ರೌಡಿ ಪೀಟರ್ ಆಲಿಯಾಸ್ ಕುಳ್ಳ ಪೀಟರ್ ಎಂಬಾತನನ್ನು ಸಿಸಿಬಿ ರೌಡಿ ನಿಗ್ರಹದಳ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಮಂಜುನಾಥ್ ಎಂಬುವರು ಕಳೆದ 15 ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ.
ಇದೇ ತಿಂಗಳು 7 ರಂದು ಮಂಜುನಾಥ್ ಅಂಗಡಿಗೆ ಹೋಗಿದ್ದ ಪೀಟರ್ ಹಾಗೂ ಆತನ ಸಹಚರರು 5 ಲಕ್ಷ ರೂಪಾಯಿ ಹಫ್ತಾ ನೀಡದಿದ್ದರೆ ಕೊಲೆ ಮಾಡುವುದಾಗಿ ಧಮಕಿ ಹಾಕಿದ್ದರು. ಮಾತುಕತೆ ಬಳಿಕ 3 ಲಕ್ಷ ರೂಪಾಯಿ ಹಣ ನೀಡಬೇಕೆಂದು ಒತ್ತಾಯಿಸಿದ್ದರು.
ಹಫ್ತಾ ಕೊಡಲಿಲ್ಲ ಅಂದ್ರೆ ಹೆಣ ಉರುಳುಸ್ತೀನಿ, ದೂರು ಕೊಟ್ಟರೆ ಹಲವು ಕೇಸ್‌ಗಳ ನಡುವೆ ಮತ್ತೊಂದು ಕೇಸ್ ಆಗುತ್ತೆ ಅಷ್ಟೇ. ಮೂರು ಲಕ್ಷ ಕೊಡಬೇಕು ಅಷ್ಟೇ, ಇಲ್ಲಾಂದ್ರೆ ಕಥೆ ಮುಗೀತು. ಕೊಡ್ಲಿಲ್ಲ ಅಂದ್ರೆ ಎತ್ತಾಕೊಂಡು ಹೋಗಿ ಖರಾಬಾಗಿ ಹೊಡೀತೀನಿ. ಹುಡುಗರಿಂದ ಚುಚ್ಚಿಸ್ತೀನಿ ಎಂದು ಪೋನ್‌ನಲ್ಲಿ ಧಮಕಿ ಹಾಕಿದ್ದ. ಈ ಸಂಬಂಧ ಮಂಜುನಾಥ ದೂರು ನೀಡಿದ ಮೇರೆಗೆ ಸಿಸಿಬಿ ಪೊಲೀಸರು ರೌಡಿಶೀಟರ್ಅನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.