ಬೆಂಗಳೂರು :ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಕ್ರಿಯನಾಗಿದ್ದ ನಟೋರಿಯಸ್ ರೌಡಿ ನಾಗರಾಜ್ ಆಲಿಯಾಸ್ ವಿಲ್ಸನ್ ಗಾರ್ಡನ್ ನಾಗನನ್ನು ಗಡಿಪಾರು ಮಾಡಲಾಗಿದೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಗಡಿಪಾರಿನ ಪ್ರಕ್ರಿಯೆ ಮುಗಿಸಿ ಆರು ತಿಂಗಳು ನಗರಕ್ಕೆ ಬರದಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರದಿಂದ ಗಡಿಪಾರು ಮಾಡಲಾಗಿದೆ. ಆರು ತಿಂಗಳವರೆಗೂ ವಿಲ್ಸನ್ ಗಾರ್ಡನ್ ನಾಗ ನಗರಕ್ಕೆ ಬರುವಂತಿಲ್ಲ. ಯಾವುದೇ ಚಟುವಟಿಕೆಯಲ್ಲಿ ತೊಡಗುವಂತಿಲ್ಲ ಎಂದು ಸೂಚಿಸಲಾಗಿದೆ.
ಈಗಾಗಲೇ ಸೆಕ್ಷನ್ 110ನಡಿ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ. ಕೊಲೆ, ಕೊಲೆ ಯತ್ನ ಸೇರಿ ಹಲವು ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ ಆರೋಪಿಯಾಗಿದ್ದಾನೆ. ಈತನಿಗೆ ಮಾತ್ರವಲ್ಲದೆ, ನಗರದಲ್ಲಿ ಸಕ್ರಿಯ ಆಗಿರುವ ಇತರ ರೌಡಿಗಳಿಗೂ ಸಿಸಿಬಿ ಹಾಗು ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
1,500 ಕುಕ್ಕರ್ ವಶ: ಬೆಂಗಳೂರು ರಾಜ್ಯ ವಿಧಾನಸಭಾ ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ನಾಕಾಬಂದಿ ಹಾಕಿ ಪೊಲೀಸರು ತಪಾಸಣೆ ಕಾರ್ಯವನ್ನು ಬಿಗಿಗೊಳಿಸಿದ್ದಾರೆ. ನಗರಕ್ಕೆ ಪ್ರವೇಶಿಸುವ ಮುಖ್ಯರಸ್ತೆಗಳಲ್ಲಿ ನಾಕಾಬಂದಿ ಹಾಕಿ ಅನುಮಾನಾಸ್ಪದವಾಗಿ ಕಂಡು ಬರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ಮತದಾರರಿಗೆ ಹಂಚಲು ಗೋದಾಮಿನಲ್ಲಿ ಇರಿಸಿದ್ದ 1500ಕ್ಕೂ ಹೆಚ್ಚು ಕುಕ್ಕರ್ ಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.