ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ರೌಡಿ ಸೇರಿದಂತೆ ನಾಲ್ವರನ್ನು ಆರ್.ಟಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನೆಲಮಂಗಲದ ಇಮ್ರಾನ್ ಅಲಿಯಾಸ್ ಬೊಡ್ಕೆ (29), ಮೋಹಿತ್ (24), ಅರ್ಫಾತ್ ಅಹಮದ್ (25) ಹಾಗೂ ಸೈಯ್ಯದ್ ಮಾಜ್ (22) ಎಂದು ಗುರುತಿಸಲಾಗಿದೆ.
ನವೆಂಬರ್ 21ರಂದು ರಾತ್ರಿ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನೇಚರ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ನುಗ್ಗಿದ್ದ ಆರೋಪಿ ಮತ್ತು ಆತನ ಸಹಚರರು, ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು 40 ಸಾವಿರ ರೂಪಾಯಿವರೆಗೂ ಸುಲಿಗೆ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿ ಬೀಡಾ ಅಂಗಡಿ ಮಾಲೀಕನ ಮೇಲೂ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮೋದಿ ರಸ್ತೆ, ಹುಸೇನಾ ಮಸೀದಿ, ಪಿಎನ್ಟಿ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋಗಳನ್ನು ಜಖಂಗೊಳಿಸಿದ್ದರು. ಆರೋಪಿ ಮತ್ತವನ ಕಡೆಯವರ ಕೃತ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಸಂತ್ರಸ್ತರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಇದಕ್ಕೂ ಮುನ್ನ ಆರ್.ಟಿ.ನಗರ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಇಮ್ರಾನ್, ಆರ್.ಟಿ.ನಗರ ಹಾಗೂ ಜೆ.ಸಿ.ನಗರ ಠಾಣಾ ವ್ಯಾಪ್ತಿಯ ರೌಡಿಯಾಗಿದ್ದು, ಕಳೆದ ಆಗಸ್ಟ್‌ನಲ್ಲಿ ಜೆ.ಸಿ.ನಗರ ಪೊಲೀಸರಿಂದ ಬಂಧಿತನಾಗಿದ್ದ.
ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಪ್ರಕರಣದಲ್ಲಿ ಇಮ್ರಾನ್ (29), ಮೋಹಿತ್ (24), ಅರ್ಫಾತ್ ಅಹಮದ್ (25) ಹಾಗೂ ಸೈಯ್ಯದ್ ಮಾಜ್ (22) ಎಂಬ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರ ಪೈಕಿ ಇಮ್ರಾನ್ ವಿರುದ್ಧ 31 ಪ್ರಕರಣಗಳಿದ್ದರೆ, ಮೋಹಿತ್ ವಿರುದ್ಧ 1, ಅರ್ಫಾತ್ ಅಹಮದ್ ಮತ್ತು ಸೈಯ್ಯದ್ ಮಾಜ್ ವಿರುದ್ಧ 10 ಪ್ರಕರಣಗಳಿವೆ. ಆರೋಪಿಗಳ ಬಂಧನದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಗೂ ತಮಿಳುನಾಡಿನ ಹೊಸೂರು ಠಾಣೆ ಸೇರಿದಂತೆ ವಿವಿಧೆಡೆ ದಾಖಲಾಗಿದ್ದ 10 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರಿಂದ 12,500 ರೂ ನಗದು, 4 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್ ತಿಳಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.