ಬೆಂಗಳೂರು:ಜೈಲಿನಿಂದ ಬಿಡುಗಡೆಯಾದ್ರೂ ಬುದ್ಧಿ ಕಲಿಯದ ರೌಡಿಶೀಟರ್ ಹಳೆಯ ಚಾಳಿ ಮುಂದುವರೆಸಿದ್ದ. ಪರಿಣಾಮ ರೌಡಿಯನ್ನು ಬಂಧಿಸಲು ತೆರಳಿದಾಗ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ.
ರೌಡಿ ಚಟುವಟಿಕೆಯಿಂದ ಮತ್ತೆ ರೌಡಿಯ ಬಂಧನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಗನ್ ಮಂಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೊಲೆ ಯತ್ನ ಸೇರಿದಂತೆ ಈತನ ವಿರುದ್ಧ 9 ಪ್ರಕರಣಗಳು ದಾಖಲಾಗಿದ್ದು, ಈತ ಜೈಲು ಸೇರಿದ್ದ. ಆದ್ರೆ ಕಳೆದ ವಾರವಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯೂ ಆಗಿದ್ದ. ರೌಡಿ ಮಂಜ ಮತ್ತೆ ಹಳೆ ಚಾಳಿ ಮುಂದುವರೆಸಿದ್ದು ವ್ಯಕ್ತಿಯೋರ್ವರ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದಾನೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜೈಲಿನಿಂದ ಬಿಡುಗಡೆಯಾದ ಮೇಲೆ ಮಂಜನ ಚಲನವಲನ ಬಗ್ಗೆ ನಿಗಾ ಇರಿಸಿದ್ದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ಹೋಗಿದ್ದಾರೆ. ಈ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್, ರೌಡಿ ಮಂಜನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.