ಬೆಂಗಳೂರು: ಮಸೀದಿ ಉಸ್ತುವಾರಿ ನೋಡಿಕೊಳ್ಳುವ ವಿಚಾರದಲ್ಲಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು, ಐವರು ಆರೋಪಿಗಳನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಸುಹೇಲ್ ಕೊಲೆ ಪ್ರಕರಣ: ಐವರು ಆರೋಪಿಗಳು ಅರೆಸ್ಟ್
ರೌಡಿಶೀಟರ್ ಸುಹೇಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರ್‌ಟಿ ನಗರದ ನಿವಾಸಿಗಳಾದ ಜಮೀರ್ ಖಾನ್ (47), ಯಾಜ್ ಖಾನ್ (55), ಇಮ್ರಾನ್ ಖಾನ್ (27), ಸೈಯ್ಯದ್ ಸನಾವುಲ್ಲಾ(33), ಫೈರೋಜ್ ಖಾನ್ (34) ಬಂಧಿತರು. ಮೋದಿ ರಸ್ತೆಯ ಈದ್ಗಾ ಮೊಹಲ್ಲಾ ನಿವಾಸಿ ಸುಹೇಲ್ (36) ಹತ್ಯೆಯಾದವನು. ಸುಹೇಲ್ ಕಳೆದ 3 ವರ್ಷಗಳಿಂದ ಮೋದಿ ಗಾರ್ಡನ್‌ನ 6ನೇ ಕ್ರಾಸ್‌ನಲ್ಲಿರುವ ಮೋದಿ ಜಿಯಾ ಮಸೀದಿಯ ಉಸ್ತುವಾರಿ ನೋಡಿಕೊಂಡಿದ್ದನು. ಈ ಹಿಂದೆ ಈ ಮಸೀದಿಯ ಉಸ್ತುವಾರಿಯನ್ನು ಆರೋಪಿ ಜಮೀರ್ ಖಾನ್ ನೋಡಿಕೊಳ್ಳುತ್ತಿದ್ದನು. ಮಸೀದಿ ಉಸ್ತುವಾರಿಯನ್ನು ಸುಹೇಲ್ ಪಡೆದ ಬಳಿಕ ಆಗಾಗ ಈ ವಿಚಾರವಾಗಿ ಸುಹೇಲ್ ಜತೆ ಜಮೀರ್ ಜಗಳ ಮಾಡುತ್ತಿದ್ದನು.
2019 ಡಿಸೆಂಬರ್‌ನಲ್ಲಿ ಇವರ ನಡುವೆ ಜಗಳ ನಡೆದು ಜಮೀರ್ ಖಾನ್‌ನ ಅಕ್ಕನ ಮಗ ಫೈರೋಜ್ ಖಾನ್‌ಗೆ ಸುಹೇಲ್ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ಆಕ್ರೋಶಗೊಂಡ ಆರೋಪಿ ಜಮೀರ್ ಹೇಗಾದರೂ ಮಾಡಿ ಸುಹೇಲ್‌ನನ್ನು ಕೊಲೆ ಮಾಡಬೇಕು ಎಂದು ಸಂಚು ರೂಪಿಸಿದ್ದನು. ಈ ನಡುವೆ ಸುಹೇಲ್ ಹಾಗೂ ಜಮೀರ್ ನಡುವೆ ರಾಜಿ ಸಂಧಾನವೂ ನಡೆದಿತ್ತು. ಆದರೆ ಈ ಸಂಧಾನಕ್ಕೆ ಸುಹೇಲ್ ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಸುಹೇಲ್‌ನನ್ನು ಮುಗಿಸಲು ಸಂಚು ರೂಪಿಸಿದ್ದರು. ಅದರಂತೆ ಏ.7ರಂದು ಮುಂಜಾನೆ 4 ಗಂಟೆಗೆ ಸುಹೇಲ್ ಸಿಗರೇಟ್ ತರಲು ಮನೆ ಬಳಿಯ ಅಂಗಡಿಗೆ ತೆರಳಿದ್ದ. ಅಲ್ಲೇ ಕಾದು ಕುಳಿತಿದ್ದ ಆರೋಪಿಗಳು ಅಲ್ ಯೂಸೂಫ ಮಸೀದಿ ಮುಂಭಾಗ ಸುಹೇಲ್‌ನನ್ನು ಅಡ್ಡಗಟ್ಟಿ ಏಕಾಏಕಿ ಮಾರಕಾಸ್ತ್ರಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದರು. ಸಾಲದಕ್ಕೆ ಆತನ ತಲೆಯ ಮೇಲೆ ಬ್ರಿಕ್ಸ್ ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳು ಸುಹೇಲ್‌ನನ್ನು ಕೊಲೆ ಮಾಡಿದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.