ಕರ್ನಾಟಕ

karnataka

ETV Bharat / state

ಚಂದ್ರನ ಅಂಗಳದಲ್ಲಿ ಸಂಶೋಧನೆ ಹೇಗೆ?: ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಮಾಹಿತಿ - ಗಗನಯಾನ ಮಿಷನ್​ಗೆ ಮುನ್ನುಡಿ

ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್​ ಸುರಕ್ಷಿತವಾಗಿ ಇಳಿದಿದೆ. ಇದೀಗ ರೋವರ್​ ಮತ್ತು ಲ್ಯಾಂಡರ್​ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಚಂದ್ರನ ಮೇಲೆ ಅನ್ವೇಷಣೆ ನಡೆಸಲಿದೆ.

Etv Bharat
Etv Bharat

By ETV Bharat Karnataka Team

Published : Aug 24, 2023, 9:49 PM IST

ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಅವರಿಂದ ಮಾಹಿತಿ

ಬೆಂಗಳೂರು :ಚಂದ್ರಯಾನ-3ರ ಲ್ಯಾಂಡರ್ ವಿಕ್ರಂ ಸುರಕ್ಷಿತವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದು ಇತಿಹಾಸ ಸೃಷ್ಟಿಸಿದೆ. ಚಂದ್ರನ ಅಂಗಳದಲ್ಲಿ ಇಳಿದ ಮೇಲೆ ಸುಮಾರು 4 ಗಂಟೆ ಸ್ಥಬ್ದವಾಗಿ ಮುಂದಿನ ಕಾರ್ಯಾಚರಣೆಗೆ ಕಾಯುತ್ತಿತ್ತು. ಲ್ಯಾಂಡಿಂಗ್ ವೇಳೆ ಎದ್ದ ದೂಳು ಇಳಿಯುವವರೆಗೆ ಕಾಯಲಾಗಿತ್ತು. ನಿನ್ನೆ 10 ಗಂಟೆಯ ಸಮಯದಲ್ಲಿ ಲ್ಯಾಂಡರ್ ಪ್ರವೇಶ ದ್ವಾರದ ಸ್ಲೋಪ್​ನ ಮೂಲಕ ನಿಧಾನವಾಗಿ ಸಣ್ಣ ಸ್ವಯಂ ಚಾಲಿತ ವಾಹನ ಪ್ರಗ್ಯಾನ್ ರೋವರ್ ಹೊರಬಂದಿದೆ. ಕಟ್ಟುಗಳನ್ನು ಬಿಚ್ಚಿ ಹೊರಬರಲು ಮತ್ತೆ 1 ಗಂಟೆ ಸಮಯ ತೆಗೆದುಕೊಂಡಿದೆ. ಸದ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ತಿಳಿಸಿದರು.

ಬುಧವಾರ ರಾತ್ರಿ 10 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸುಮಾರು 11:15ಕ್ಕೆ ಮುಗಿದಿದೆ. ಸದ್ಯ ರೋವರ್ ಲ್ಯಾಂಡರ್ ಜಂಟಿಯಾಗಿ ಚಂದ್ರನ ಮೇಲ್ಮೈನ ಅನ್ವೇಷಣೆಯಲ್ಲಿ ತೊಡಗಿವೆ. ಮುಂದಿನ 14 ದಿನ ರೋವರ್​ನಲ್ಲಿರುವ 2 ವೈಜ್ಞಾನಿಕ ಉಪಕರಣ ಮತ್ತು ಲ್ಯಾಂಡರ್​ನ 4 ಉಪಕರಣ ಅನ್ವೇಷಣೆಯನ್ನು ಮಾಡಲಿವೆ. ಈ ಪ್ರದೇಶದಲ್ಲಿ 14 ದಿನಗಳ ಕಾಲ ಸೂರ್ಯನ ಕಿರಣಗಳು ಬೀಳುತ್ತದೆ. ಸೋಲಾರ್ ಪ್ಯಾನೆಲ್​ಗಳು ಸೂರ್ಯನ ಕಿರಣಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯಾಗಿ ಉಪಕರಣಗಳು ಕಾರ್ಯನಿರ್ವಹಿಸುತ್ತದೆ ಎಂದರು.

ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಅವರಿಂದ ಮಾಹಿತಿ

ವೈಜ್ಞಾನಿಕ ಸಂಶೋಧನೆಗಳು: ರೋವರ್​ನ 2 ಉಪಕರಣಗಳು ಚಂದ್ರನ ನೆಲದ ಮೇಲಿನ ಖನಿಜ ಸಂಪತ್ತು ಮತ್ತು ಕಂಪನಗಳ ವೈಜ್ಞಾನಿಕ ಸಂಶೋಧನೆಯನ್ನು ನಡೆಸಿ ಹೆಚ್ಚಿನ ಮಾಹಿತಿ ರವಾನಿಸಲಿದೆ. ಲ್ಯಾಂಡರ್​ನ 4 ಉಪಕರಣಗಳು ಮಣ್ಣಿನ ಉಷ್ಣತೆ, ಮೇಲ್ಪದರದ ರಚನೆ, ಶೇಕಡಾ ವ್ಯತ್ಯಾಸ ಮತ್ತು ದೂರವನ್ನು ಅಳೆಯಲಿದೆ.

ಮಾಹಿತಿ ರವಾನೆ ಹೇಗೆ?:ರೋವರ್‌ಮೊದಲು ಮಾಹಿತಿಯನ್ನು ನೌಕೆಗೆ ರವಾನಿಸುತ್ತದೆ. ಅಲ್ಲಿಂದ ಇಸ್ರೋ ಕೇಂದ್ರಗಳಿಗೆ ರವಾನೆಯಾಗಲಿದೆ. ನಗರದ ಬ್ಯಾಲಾಳಿನ ಡೇಟಾ ಕೇಂದ್ರದ ದೊಡ್ಡ ಡಿಶ್ ಮೂಲಕ ಸಂಗ್ರಹಿಸಲಾಗುತ್ತಿದೆ. ಇಲ್ಲಿನಿಂದ ಸಂದೇಶಗಳನ್ನು ಕೂಡ ಲ್ಯಾಂಡರ್ ಮುಖಾಂತರ ರೋವರ್​ಗೆ ತಲುಪಲಿದೆ. ಇನ್ನೊಂದು ವಿಧಾನವಾಗಿ ಚಂದ್ರಯಾನ- 2 ನೌಕೆಯ ಮೂಲಕವೂ ಸಂವಹನಗಳು ನಡೆಯುತ್ತಿದೆ.

ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಅವರಿಂದ ಮಾಹಿತಿ

14 ದಿನಗಳ ನಂತರ ಏನಾಗುತ್ತದೆ?: ರೋವರ್ ಗಂಟೆಗೆ ಕೆಲವು ಮೀಟರ್​ಗಳು ಮಾತ್ರ ಚಲಿಸುತ್ತದೆ. ಇಡೀ 14 ದಿನ ಚಂದ್ರನ ಮೇಲೆ ಕೆಲವು 100 ಮೀಟರ್ ಚಲಿಸಲಿದೆ. 14 ದಿನಗಳ ನಂತರ ಇಡೀ ಪ್ರದೇಶದಲ್ಲಿ ಕತ್ತಲು ಆವರಿಸಲಿದೆ. ಆದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತವಾಗಲಿದೆ. ಆಗ ರೋವರ್ ಮತ್ತು ಲ್ಯಾಂಡರ್ ಯಾವುದೇ ರೀತಿಯ ಕಾರ್ಯಾಚರಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಹಗಲು ಪ್ರಾರಂಭವಾದಾಗ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆಯಿದೆ. ಎಲ್ಲಿಯವರೆಗೆ ಉಪಕರಣಗಳು ಕಾರ್ಯನಿರ್ವಹಿಸುತ್ತವೆಯೋ ಅಲ್ಲಿಯವರೆಗೂ ನಮಗೆ ಮಾಹಿತಿ ರವಾನೆಯಾಗಲಿದೆ.

ಈ ಮಿಷನ್​ನಿಂದ ಪ್ರೇರಣೆಗೊಂಡು, ತಾಂತ್ರಿಕ ನೌಪುಣ್ಯತೆಯಿಂದ ಇನ್ನಷ್ಟು ಉನ್ನತೀಕರಿಸಿದ ಉಪಕರಣಗಳನ್ನು ಚಂದ್ರನ ಮೇಲ್ಮೈಗೆ ಕಳುಹಿಸಲು ಸಾಧ್ಯವಾಗಲಿದೆ. ಮುಂದಿನ ಗಗನಯಾನ ಮಿಷನ್​ಗೆ ಮುನ್ನುಡಿ ಬರೆದಿದೆ ಎಂದು ಎಂದು ವಿಜ್ಞಾನಿ ವಿವರಿಸಿದರು.

ಇದನ್ನೂ ಓದಿ :ಸಣ್ಣದೊಂದು ದೋಷದಿಂದ ಇಸ್ರೋ ನಾಲ್ಕು ವರ್ಷ ಕಾಯಬೇಕಾಯಿತು: ಚಂದ್ರಯಾನ-3 ಚರಿತ್ರೆ ಸೃಷ್ಟಿಗೆ ಮಾಜಿ ಮುಖ್ಯಸ್ಥ ಕೆ ಶಿವನ್ ಹರ್ಷ

ABOUT THE AUTHOR

...view details