ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಸ್ ಪಾರ್ಕ್ನಲ್ಲಿರುವ ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಸತತ 9 ಗಂಟೆಗಳಿಂದ ಶೋಧಕಾರ್ಯ ಮುಂದುವರೆಸಿದ್ದು, ಬೇಗ್ ಆಪ್ತ ಎಸಾನ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ರೋಷನ್ ಬೇಗ್ ಮನೆಗೆ 10ಕ್ಕೂ ಹೆಚ್ಚು ಅಧಿಕಾರಿಗಳು ಸಿಆರ್ಪಿಎಫ್ ಪೊಲೀಸ್ ಭದ್ರತೆಯೊಂದಿಗೆ ದಾಳಿ ನಡೆಸಿದ್ದರು. ರೋಷನ್ ಬೇಗ್ ಮನೆಯ ಲಾಕರ್ನಲ್ಲಿದ್ದ ಹಲವಾರು ದಾಖಲಾತಿ ಪರಿಶೀಲನೆ ನಡೆಸಿದ್ದರು. ಬಳಿಕ ರೋಷನ್ ಬೇಗ್ ಆಪ್ತ ಎಸಾನ್ ನನ್ನು ವಶಕ್ಕೆ ಪಡೆದಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐನಿಂದ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ರೋಷನ್ ಬೇಗ್ ಮತ್ತು ಜಮೀರ್ ಅಹಮದ್ ಖಾನ್ ಅವರ ಆಸ್ತಿ, ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕುತ್ತಿದೆ. ಕಳೆದ ವರ್ಷ ಸಿಬಿಐ ರೋಷನ್ ಬೇಗ್ ಅವರನ್ನು ಬಂಧಿಸಿದ್ದು, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು.
ದಾಳಿಯ ವೇಳೆ ಮನೆಯಲ್ಲೇ ಇದ್ದ ರೋಷನ್ ಬೇಗ್ ಅವರ ಸಮ್ಮುಖದಲ್ಲೇ ಎಲ್ಲ ಲಾಕರ್ ಓಪನ್ ಮಾಡಿಸಿ, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದ ಇಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಜಮೀರ್ ಸಹೋದರನೂ ವಶಕ್ಕೆ:
ಜಮೀರ್ ಸಹೋದರ ಮುಜಾಮಿಲ್ ಅಹಮದ್ ಖಾನ್ನನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಇವರನ್ನು ಶಾಂತಿ ನಗರದ ಇಡಿ ಕಚೇರಿಗೆ ಇಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಐಎಂಎ ಹಗರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ನೊಂದಿಗೆ ಹಣಕಾಸಿನ ನಂಟು ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ.