ಬೆಂಗಳೂರು: ರೂಮ್ ಟು ರೀಡ್ ಹಾಗೂ ಸರ್ವ ಶಿಕ್ಷಣ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ 2019 ನೇ ಸಾಲಿನ ವಿಶ್ವ ಸಾಕ್ಷರತಾ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಗ್ರಂಥಾಲಯ ಚಟುವಟಿಕೆ ಕಾರ್ಯಕ್ರಮವನ್ನು ನಗರದ ಕರ್ನಾಟಕ ಪಬ್ಲಿಕ್ ಶಾಲೆ ವರ್ತೂರಿನಲ್ಲಿ ಆಯೋಜಿಸಲಾಗಿತ್ತು.
ವರ್ತೂರು ವಾರ್ಡಿನ ಬಿಬಿಎಂಪಿ ಕಾರ್ಪೋರೇಟರ್ ಪುಷ್ಪ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಒಂದೇ ಸೂರಿನಡಿ ವಿವಿಧ ಶಾಲಾ ಶಿಕ್ಷಕರು ಹಾಗೂ ಮಕ್ಕಳನ್ನು ಕರೆಸಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಕ್ರಿಯಾಶೀಲರಾಗಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಉಪಾಧ್ಯಕ್ಷರಾದ ಕೃಷ್ಣರೆಡ್ಡಿ, ಸರ್ಕಾರಿ ಶಾಲಾ ಮಕ್ಕಳು ಜೀವನದ ಮೌಲ್ಯಗಳನ್ನು ತಿಳಿಯಲು ರೂಮ್ ಟು ರೀಡ್ ವತಿಯಿಂದ ಸ್ಥಾಪಿಸಲಾದ ಗ್ರಂಥಾಲಯ ಹೆಚ್ಚು ಸಹಕಾರಿಯಾಗಿದೆ. ಇಲ್ಲಿರುವ ಪುಸ್ತಕಗಳ ಸದುಪಯೋಗವನ್ನು ಮಕ್ಕಳು ಅರಿತು, ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಚಿತ್ರಕಲೆ, ಕಥೆ ಬರೆಯುವುದು, ಕಥೆ ಹೇಳುವುದು, ರಸಪ್ರಶ್ನೆ ಕಾರ್ಯಕ್ರಮ ಹಾಗೂ ಶಿಕ್ಷಕರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕರಾದ ಕೆ.ಲಕ್ಮಣ್, ಬಳಗೆರೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ರಾಜಶೇಖರ್ ಹಂದೆ, ರೂಮ್ ಟು ರೀಡ್ ಲಿಟರೆಸಿ ಅಸೋಸಿಯೆಟ್ ವಿನೋದ, ಪಾಂಡು, ಗ್ರಂಥಾಲಯ ಪಾಲಕರಾದ ಜಗದೀಶ್, ಸೌಮ್ಯ ಹಾಗೂ ದಿವ್ಯ ಉಪಸ್ಥಿತರಿದ್ದರು.