ಅವರು ಬೇಗ ಗುಣಮುಖರಾಗಲಿ, ವೈಯಕ್ತಿಕ ತೇಜೋವಧೆ ಸರಿಯಲ್ಲ- ರೋಹಿಣಿ ಸಿಂಧೂರಿ ಪ್ರತಿಕ್ರಿಯೆ ಬೆಂಗಳೂರು : ಐಪಿಎಸ್ ಅಧಿಕಾರಿ ಆರೋಪಗಳಿಗೆ ರೋಹಿಣಿ ಸಿಂಧೂರಿ ಮೊದಲ ಬಾರಿಗೆ ಮೌನ ಮುರಿದಿದ್ದು 'ಇದು ಮಾತನಾಡುವ ವೇದಿಕೆಯಲ್ಲ, ಈ ರೀತಿ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ನಾನು ಹೇಳಬಹುದಾದ ಒಂದೇ ಮಾತು ಅಂದ್ರೆ ಆದಷ್ಟು ಬೇಗ ಅವರು ಗುಣಮುಖರಾಗಲಿ' ಅಷ್ಟೇ ಎಂದಿದ್ದಾರೆ.
ಜಾಲಹಳ್ಳಿಯ ತಮ್ಮ ನಿವಾಸದ ಬಳಿ ಮಾಧ್ಯಮಗಳ ಮುಂದೆ ಮಾತನಾಡಿದ ರೋಹಿಣಿ ಸಿಂಧೂರಿ 'ಈ ವಿಚಾರವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ, ಕೆಲಸದ ವಿಚಾರದಲ್ಲಿ ಏನಾದರೂ ಮಾತನಾಡಲಿ, ಆದರೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ಅಲ್ಲದೇ ಈಗಾಗಲೇ ಈ ವಿಚಾರವಾಗಿ ನನ್ನ ಪತಿ ಕೂಡಾ ಮಾತನಾಡಿದ್ದಾರೆ' ಎಂದು ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ನಾನು ಕನ್ನಡಿಗನೇ, ಎಂದಿಗೂ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ: ಐಪಿಎಸ್ ಅಧಿಕಾರಿ ಆರೋಪಕ್ಕೆ ರೋಹಿಣಿ ಸಿಂಧೂರಿ ಪತಿ ಸುಧೀರ್ ಕಿಡಿ ಕಾರಿದ್ದಾರೆ. ವೈಯಕ್ತಿಕ ಉದ್ದೇಶದಿಂದ ಆರೋಪಿಸುತ್ತಿರುವವರಿಗೆ ಮಾನಸಿಕ ತೊಂದರೆಯಿದೆ ಎಂದು ಆರೋಪಿಸಿರುವ ಅವರು, ನಾನು ಕನ್ನಡಿಗ, ಎಲ್ಲಿಯೂ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಂಡವನಲ್ಲ, ಸುಖಾಸುಮ್ಮನೆ ಮಾತನಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸುಧೀರ್, ’’ಅವರು ಯಾರು…? ಡಿ.ಕೆ ರವಿ ಅವರು ಈಗ ಇಲ್ಲ, ಅವರ ಬಗ್ಗೆ ಮಾತನಾಡಬಾರದು. ಔಟ್ ಆಫ್ ಕಾಂಟಾಕ್ಟ್ ಪೋಟೊ ಯಾಕೆ ತೆಗೆದು ವೈರಲ್ ಮಾಡಿದ್ದಾರೆ. ನಾವು ಯಾರಿಗೂ ಶೇರ್ ಮಾಡಿಲ್ಲ, ಇವರಿಗೆ ಹೇಗೆ ಸಿಕ್ಕಿದೆ. ಅವರ ಸಿಸ್ಟರ್ ಬಳಿ ಹೇರ್ ಕಟ್ ಮಾಡ್ಸಿರೋದು ಆ ಪೋಟೊ ವೈರಲ್ ಮಾಡಿದ್ದಾರೆ. ಪೋಟೋ ಹೇಗೆ ಅವರಿಗೆ ಸಿಕ್ಕಿದೆ ಗೊತ್ತಿಲ್ಲ. ಮೂವರು ಐಎಎಸ್ ಆಧಿಕಾರಿಗಳಿದ್ದಾರೆ ಅಂತಿದ್ದಾರೆ. ಆ ಅಧಿಕಾರಿಗಳ ಹೆಸರನ್ನು ಹೇಳಲಿ. ಇಲ್ಲವಾದರೆ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಾನು ಯಾವತ್ತೂ ಮಾಧ್ಯಮದ ಮುಂದೆ ಬಂದವನಲ್ಲ. ಆದರೆ, ಈ ವಿಚಾರ ನನಗೆ ತೀರಾ ವೈಯಕ್ತಿಕ ವಿಚಾರವಾಗಿರುವುದರಿಂದ ಮಾತನಾಡುತ್ತಿದ್ದೇನೆ. ತನಗಿಂದ 10 ವರ್ಷ ಜೂನಿಯರ್ ಆಗಿರುವ ಸಿಂಧೂ ಇಷ್ಟು ಹೆಸರು ಮಾಡಿದ್ದಾರೆ ಎಂದು ಅವರಿಗೆ ಅಸೂಯೆ ಇದೆ. ಹೀಗಾಗಿ ಅವರು ಸುಖಾ ಸುಮ್ಮನೆ ಆರೋಪ ಮಾಡ್ತಿದ್ದಾರೆ'' ಎಂದಿದ್ದಾರೆ.
ಐಪಿಎಸ್ ಅಧಿಕಾರಿಯ ಪರ್ಸನಲ್ ಅಜೆಂಡಾ ಏನಿದೆ ಗೊತ್ತಾಗಬೇಕು. ಅವರಿಗೆ ಪ್ರಚಾರ ಬೇಕಾಗಿದೆ. ಆದರೆ ಸಿಂಧೂ ಕೆಲಸವೇ ಹೇಳತ್ತೆ, ಅವರಿಗೆ ಪ್ರಚಾರದ ಗೀಳು ಇಲ್ಲ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ಪ್ರತ್ಯುತ್ತರ ನೀಡಿದ್ದಾರೆ.
ಫೆಸ್ಬುಕ್ನಲ್ಲಿ ಡಿ. ರೂಪಾ ಮತ್ತೆ ಪ್ರಶ್ನೆ:ಸುಧೀರ್ ಪ್ರತಿಕ್ರಿಯೆ ನೀಡುತ್ತಿದ್ದಂತೆ ತಮ್ಮ ಫೇಸ್‌ಬುಕ್ ಮೂಲಕ ಕೌಂಟರ್ ನೀಡಿರುವ ಡಿ.ರೂಪಾ ಅವರು 'ಸಿಂಧೂರಿ ಅವರ ಪತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದರೆ ಏನರ್ಥ? ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ? ಉತ್ತರಗಳಿಲ್ಲವೇ? ಅವರ ಪತಿ ಹೇಳೋದು, ಫೋನ್ ಹ್ಯಾಕ್ ಮಾಡಲಾಗಿದೆ ಎಂದು. ಇದು ನಂಬುವ ಮಾತೇ? ಏನೋ ಹೇಳಬೇಕು ಪಾಪ‘‘ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಸಂಧಾನಕ್ಕೆ ಹೋಗಿ ಏನು ಮುಚ್ಚಿಡುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ? ಸಿಂಧೂರಿಗೆ ರೂಪಾ ಪ್ರಶ್ನೆ