ಬೆಂಗಳೂರು: ಸಾರ್ವಜನಿಕವಾಗಿ ಜಟಾಪಟಿಗಿಳಿದಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ನಿನ್ನೆ ಇಬ್ಬರು ಮಹಿಳಾಧಿಕಾರಿಗಳಿಗೆ ಕಾರಣ ಕೇಳಿ ಸರ್ಕಾರ ನೋಟಿಸ್ ನೀಡಿತ್ತು. ಇದಕ್ಕೂ ಮುನ್ನ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಇಬ್ಬರು ನೀಡಿದ ಹೇಳಿಕೆಗಳು ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು.
ಇದೀಗ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿದ್ದ ರೋಹಿಣಿ ಸಿಂಧೂರಿ ಅವರ ಸ್ಥಾನಕ್ಕೆ ಕೌಶಾಲ್ಯಾಭಿವೃದ್ಧಿ, ಉದ್ಯಮ, ಜೀವನೋಪಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಬಸವರಾಜೇಂದ್ರ ಅವರನ್ನು ವರ್ಗ ಮಾಡಲಾಗಿದೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಎಂಡಿಯಾಗಿದ್ದ ಡಿ.ರೂಪಾ ಅವರನ್ನು ವರ್ಗಾಯಿಸಿ, ಆ ಸ್ಥಾನಕ್ಕೆ ಡಿ.ಭಾರತಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಡಿ.ರೂಪಾ ಅವರ ಪತಿ ಮೌನಿಶ್ ಮೌದ್ಗಿಲ್ರನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸರ್ಕಾರ ವರ್ಗಾಯಿಸಿದೆ. ಅವರು ಸರ್ವೆ ಸೆಟ್ಲ್ಮೆಂಟ್ ಮತ್ತು ಭೂ ದಾಖಲೆ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸ್ಥಾನಕ್ಕೆ ಸಿ.ಎನ್.ಶ್ರೀಧರ ನೇಮಕಗೊಂಡಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಡಿ.ರೂಪಾ ಮೌದ್ಗಿಲ್ ಅವರು ಭಾನುವಾರದಂದು ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಹಾಗೂ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ 20 ಆರೋಪಗಳನ್ನು ಮಾಡಿದ್ದರು. ನಂತರ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪ, ದೂರು-ಪ್ರತಿದೂರು ದೇಶದ ಗಮನ ಸೆಳೆದಿತ್ತು.
ಡಿ.ರೂಪಾ ಆರೋಪವೇನು?: "ನನ್ನ 20 ಅಂಶದ ದೂರಿನಲ್ಲಿ 7 ವಿಚಾರಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು, ಅದಕ್ಕೆ ರೋಹಿಣಿ ಉತ್ತರಿಸಲಿ. ಅವರು ಪುರುಷ ಐಎಎಸ್ ಅಧಿಕಾರಿಗಳಿಗೆ ಫೋಟೋಗಳನ್ನು ಕಳಿಸಿರುವುದು ವೈಯಕ್ತಿಕ ಅಲ್ಲ, ಅದು ಸೇವಾ ನಿಯಮದ ಉಲ್ಲಂಘನೆ. ಸಾರಾ ಮಹೇಶ್ ಅವರೇ ಸಂಧಾನಕ್ಕೆ ಬಂದಿದ್ದರು ಎಂದಿದ್ದಾರೆ. ಈ ಸಂಧಾನ ಏತಕ್ಕೆ?. ಇಲ್ಲಿಯವರೆಗೆ ರೋಹಿಣಿ ವಿರುದ್ಧ ಆರೋಪ ಸಾಬೀತಾಗಿದ್ದರೂ ಏಕೆ ಕ್ರಮ ಆಗಿಲ್ಲ. ಈ ಬಗ್ಗೆ ಉತ್ತರಿಸಲಿ" ಎಂದು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿದ ಪ್ರತಿದೂರಿನಲ್ಲಿ ತಿಳಿಸಿದ್ದಾರೆ.
ರೋಹಿಣಿ ಸಿಂಧೂರಿ ಹೇಳಿದ್ದೇನು?: "ನನ್ನ ವಿರುದ್ಧ ರೂಪಾ ಮಾಡಿರುವ ಭ್ರಷ್ಟಾಚಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಿದ್ದಾರೆ. ಮೂವರು ಐಎಎಸ್ ಅಧಿಕಾರಿಗಳಿಗೆ ಆಕ್ಷೇಪಾರ್ಹ ಫೋಟೋ ಕಳಿಸಿದ್ದೇನೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ನಾಗರಿಕ ಸೇವಾ ನಿಯಾಮಾವಳಿ ಉಲ್ಲಂಘಿಸಿರುವ ರೂಪಾ ವಿರುದ್ದ ಕ್ರಮ ಕೈಗೊಳ್ಳಬೇಕು" ಎಂದು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.
ಇದಕ್ಕೂ ಮೊದಲು ವಿಧಾನಸೌಧದಲ್ಲಿ ಮಾಧ್ಯಮದವರ ಮುಂದೆ ಬಂದು ಡಿ.ರೂಪಾ ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ಭ್ರಷ್ಟಾಚಾರ ಹಾಗೂ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪ ಮಾಡಿದ್ದರು. ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ರೋಹಿಣಿ ಸಿಂಧೂರಿ, "ರೂಪಾ ಮೌದ್ಗಿಲ್ ನನ್ನ ವಿರುದ್ದ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ" ಎಂದಿದ್ದರು.
ಇದನ್ನೂ ಓದಿ:ರೋಹಿಣಿ ಸಿಂಧೂರಿ, ರೂಪಾ ಬಹಿರಂಗ ಜಟಾಪಟಿ; ರಾಜ್ಯ ಸರ್ಕಾರದಿಂದ ನೋಟಿಸ್ ಜಾರಿ